ಬಿ.ಸಿ.ರೋಡ್: ಪ್ರಥಮ ದರ್ಜೆ ನ್ಯಾಯಾಲಯ ಕಟ್ಟಡ ಲೋಕಾರ್ಪಣೆ
ಬಂಟ್ವಾಳ: ಬಿ.ಸಿ ರೋಡ್‌ನಲ್ಲಿ ಸುಮಾರು ರು. ಎರಡೂವರೆ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಹಿರಿಯ ವ್ಯಾವಹಾರಿಕ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ ಕಟ್ಟಡ ಶನಿವಾರ ಲೋಕಾರ್ಪಣೆಗೊಂಡಿತು.
ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಹಾಗೂ ದ.ಕ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶ ಡಾ.ಕೆ. ಭಕ್ತವತ್ಸಲ ನೂತನ ಕಟ್ಟಡ ಉದ್ಘಾಟಿಸಿ, ಮಾತನಾಡಿದರು.
ಬಂಟ್ವಾಳ ನ್ಯಾಯಾಲಯದಲ್ಲಿ ಕಿರಿಯ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿರುವ ಪುಷ್ಪ ಮತ್ತು ಸರಸ್ವತಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಮೂವರು ಕಿರಿಯ ನ್ಯಾಯವಾದಿಗಳು ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು ಅವರನ್ನು ಉಚ್ಚ ನ್ಯಾಯಾಲಯದ ನ್ಯಾಯಧೀಶ ಬಿ.ವಿ. ಪಿಂಟೋ ಅಭಿನಂದಿಸಿದರು.
ಮುಖ್ಯ ಅತಿಥಿ, ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿದರು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಚೌಡಾಪುರ್ಕರ್ ಅರುಣ್, ಬಂಟ್ವಾಳದ ಹಿರಿಯ ಸಿವಿಲ್ ನ್ಯಾಯಾಧೀಶೆ ಎ.ಕೆ. ನವೀನ ಕುಮಾರಿ, ಪ್ರಧಾನ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಜಯಪ್ರಕಾಶ್ ಡಿ.ಆರ್. ಇದ್ದರು.
ವಕೀಲರ ಸಂಘದ ಅಧ್ಯಕ್ಷ ಸುರೇಶ್ ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ ಗಣೇಶ್ ಬಿ. ವಂದಿಸಿದರು. ವಕೀಲರಾದ ನರೇಂದ್ರನಾಥ ಭಂಡಾರಿ, ಪ್ರಸಾದ್ ಕುಮಾರ್, ಸುರೇಶ್ ಕುಮಾರ್, ಕೆ.ವಿ.ಭಟ್, ಶಿವಪ್ರಸಾದ್ ನಿರೂಪಿಸಿದರು.
ಇಂದು ಸ್ಕೂಲ್ ಬಸ್ ಹಸ್ತಾಂತರ
ಮಂಗಳೂರು: ರೋಟರಿ ಮಂಗಳೂರು ಉತ್ತರ ವತಿಯಿಂದ ಅ. 28 ರಂದು ಬೆಳಗ್ಗೆ 10.30ಕ್ಕೆ ಶಕ್ತಿನಗರದ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆ ಸಾನಿಧ್ಯಕ್ಕೆ ಸ್ಕೂಲ್ ಬಸ್ ಕೊಡುಗೆ ನೀಡಲಾಗುವುದು. ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಎನ್. ಪ್ರಕಾಶ್ ಉದ್ಘಾಟಿಸುವರು. ರೋಟರಿ ಜಿಲ್ಲೆಯ ಮಾಜಿ ರಾಜ್ಯಪಾಲ ಹೆಚ್. ರಾಜೇಂದ್ರ ರೈ ಸಾನಿಧ್ಯ ಸಂಸ್ಥೆಗೆ ಬಸ್ ಹಸ್ತಾಂತರಿಸುವರು ಎಂದು ರೋಟರಿ ಫೌಂಡೇಶನ್ ದತ್ತು ನಿಧಿ ಅಧ್ಯಕ್ಷ ಕೆ. ಕೃಷ್ಣ ಶೆಟ್ಟಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸುಮಾರು ರು. 13.50 ಲಕ್ಷ ಮೌಲ್ಯದ ಬಸ್ಸಿನಲ್ಲಿ 32 ಆಸನಗಳಿವೆ. ಸಾನಿಧ್ಯ ಸಂಸ್ಥೆಯ ಪ್ರಧಾನ ಬೇಡಿಕೆ ಇದಾಗಿತ್ತು. ಇಂಗ್ಲೆಂಡಿನ ರೋಟರಿ ಕ್ಲಬ್ ಆಫ್ ಕೆಂಡಲ್ ಸಹಯೋಗದಲ್ಲಿ ರೋಟರಿ ಅಂತಾರಾಷ್ಟ್ರೀಯ ಮ್ಯಾಚಿಂಗ್ ಗ್ರ್ಯಾಂಟಿನ ಯೋಜನೆಯಡಿ ಬಸ್ ಕೊಡುಗೆ ಮಾಡಲಾಗಿದೆ ಎಂದರು.ಸಾನಿಧ್ಯ ಸಂಸ್ಥೆ ಆಡಳಿತಾಧಿಕಾರಿ ವಸಂತ್ ಕುಮಾರ್ ಶೆಟ್ಟಿ ಮಾತನಾಡಿ, ಸರ್ಕಾರ ಮಕ್ಕಳಿಗೆ ಪುಸ್ತಕ, ಬ್ಯಾಗ್, ಸಮವಸ್ತ್ರ ಎಲ್ಲವನ್ನೂ ವಿತರಿಸುತ್ತಿದೆ. ಆದರೆ ಬುದ್ದಿಮಾಂದ್ಯ ಮಕ್ಕಳನ್ನು ಕರೆದುಕೊಂಡು ಹೋಗಲು ಬಸ್ ವ್ಯವಸ್ಥೆ ಕಲ್ಪಿಸದಿರುವುದು ದುರಾದೃಷ್ಟ. ಇದಕ್ಕಾಗಿ ದಾನಿಗಳ ನೆರವು ಪಡೆಯಬೇಕಾದ ಪರಿಸ್ಥಿತಿ ಒದಗಿದೆ. ಸಾನಿಧ್ಯ ಶಾಲೆಯಲ್ಲಿ ನ. 2 ರಂದು ಸಂಜೆ 6ಕ್ಕೆ ದೀಪಾವಳಿ ಸಂಭ್ರಮವನ್ನು ಆಚರಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಯೋಜನೆ ಸಂಪರ್ಕಾಧಿಕಾರಿ ಪಿ. ರೋಹಿನಾಥ್, ರೋಟರಿ ಕಾರ್ಯದರ್ಶಿ ಎ. ಮೋಹನ್ ಇದ್ದರು.