ಮೋದಿಯಿಂದ ದೇಶಕ್ಕೆ ಹೊಸ ದಿಕ್ಕು
ಗೀತಗಾಯನ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ
ಮಂಗಳೂರು: ಈ ದೇಶದ ಗಲ್ಲಿ ಗಲ್ಲಿಗಳಲ್ಲಿ ನರೇಂದ್ರ ಮೋದಿ ಹೆಸರು ಕೇಳಿ ಬರುತ್ತಿದ್ದು, ಅವರು ಪ್ರಧಾನಿಯಾಗುವ ಕಾಲ ಸನ್ನಿಹಿತವಾಗಿದೆ. ದೇಶವನ್ನು ಸಮರ್ಥವಾಗಿ ಮುನ್ನಡೆಸುವ ನಾಯಕನಿದ್ದರೆ ಅದು ನರೇಂದ್ರ ಮೋದಿ ಮಾತ್ರ. ಅವರ ನಾಯಕತ್ವದಿಂದ ಈ ದೇಶಕ್ಕೊಂದು ಹೊಸ ದಿಕ್ಕು ದೊರೆಯಲಿದೆ ಎಂದು ಜಾಗೋ ಭಾರತ್ ಖ್ಯಾತಿಯ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟಿದ್ದಾರೆ. ನಮೋ ಬ್ರಿಗೇಡ್ ವತಿಯಿಂದ ಭಾನುವಾರ ನಗರದ ಕೇಂದ್ರ ಮೈದಾನದಲ್ಲಿ ಹಮ್ಮಿಕೊಂಡಿದ್ದ ಗೀತಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನೆಹರೂ ಪ್ರಧಾನಿಯಾಗಿದ್ದಾಗ ಆರಂಭಗೊಂಡ ತುಷ್ಟೀಕರಣ ನೀತಿಯನ್ನು ಕಾಂಗ್ರೆಸ್ ಈಗಲೂ ಮುಂದುವರಿಸಿಕೊಂಡು ಬಂದಿದೆ. ಜಾತಿಯ ಸಮೀಕರಣದ ಲೆಕ್ಕಾಚಾರ ಆರಂಭಿಸಿದ್ದೇ ನೆಹರೂ. ಬಲವಾಗಿ ಬೇರೂರಿರುವ ಜಾತಿ ಸಮೀಕರಣವನ್ನು ಹೋಗಲಾಡಿಸಿ ಎಲ್ಲರನ್ನು ಸಮಾನವಾಗಿ ಕಂಡು ದೇಶವನ್ನು ಅಭಿವೃದ್ಧಿಪಡಿಸುವುದೇ ಮೋದಿ ಕನಸು. ಮೋದಿ ಎಂದೂ ಜಾತಿಯನ್ನು ಟ್ರಂಪ್ ಕಾರ್ಡ್ ಮಾಡಿ ಓಟು ಪಡೆದವರಲ್ಲ. ಕಾಂಗ್ರೆಸ್ನ ಒಡೆದು ಆಳುವ ನೀತಿ ವಿರುದ್ಧ ಇಡೀ ದೇಶದ ತರುಣ ಸಮೂಹ ಸಜ್ಜಾಗಿದ್ದು, ಮೋದಿ ಅವರನ್ನು ಪ್ರಧಾನಿಯನ್ನಾಗಿ ಕಾಣುವ ಕನಸು ಕಾಣುತ್ತಿದೆ ಎಂದರು. ರಿಕ್ಷಾ ಚಾಲಕ ರಾಜು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಮೋ ಬ್ರಿಗೇಡ್ ರೂವಾರಿ ನರೇಶ್ ಶೆಣೈ, ಪ್ರಮುಖರಾದ ಬೋಳ ಚಿತ್ತರಂಜನ್ದಾಸ್ ಶೆಟ್ಟಿ, ಬಿಎಸ್ಎನ್ಎಲ್ ವೃತ್ತ ಅಧಿಕಾರಿ ಎಸ್.ಎಂ. ಹೆಗಡೆ ಇದ್ದರು. ನಮೋ ಬ್ರಿಗೇಡ್ ಸಂಚಾಲಕ ಗೋಪಿನಾಥ್ ಭಟ್ ಸ್ವಾಗತಿಸಿದರು.