ಪೊಲೀಸ್ ಸಿಬ್ಬಂದಿ, ಗ್ರಾಮ ಕರಣಿಕ ದಂಪತಿ ಮನೆಯಲ್ಲಿ ಬಾಲಕಾರ್ಮಿಕಳು ಪತ್ತೆ
ಮಂಗಳೂರು: ಚೈಲ್ಡ್ಲೈನ್, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಂಯುಕ್ತ ಕಾರ್ಯಾಚಾರಣೆಯಲ್ಲಿ ಬಂಟ್ವಾಳ ಬಿ.ಸಿ.ರೋಡ್ನ ಅಜ್ಜಿಬೆಟ್ಟು ಬಳಿಯ ಮನೆ ಕೆಲಸ ಮಾಡುತ್ತಿದ್ದ 8 ವರ್ಷದ ಬಾಲಕಿಯನ್ನು ಶನಿವಾರ ರಕ್ಷಿಸಲಾಗಿದೆ.
ಬಾಲಕಿ ಕೆಲಸ ಮಾಡುತ್ತಿದ್ದ ಮನೆ ಕದ್ರಿ ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿ ಈರೂ ನಾಯಕ್ ಮತ್ತು ಬಂಟ್ವಾಳ ಗ್ರಾಮ ಕರಣಿಕ ಜ್ಯೋತಿಬಾಯಿ ದಂಪತಿಗೆ ಸೇರಿದ್ದು ಎಂದು ತಿಳಿದುಬಂದಿದ್ದು, ಕಾರ್ಮಿಕ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. 10 ವರ್ಷದೊಳಗಿನ ಮಗುವನ್ನು ಕೆಲಸ ಮಾಡಿಸುತ್ತಿದ್ದಾರೆ ಎಂಬ ಮಾಹಿತಿ ಶಿಕ್ಷಣ ಇಲಾಖೆಯಿಂದ ಚೈಲ್ಡ್ಲೈನ್ಗೆ ಬಂದ ಹಿನ್ನಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು.
ಮೂಲತಃ ಬಳ್ಳಾರಿ ನಿವಾಸಿಯಾದ ಮನಿಷಾ (ಹೆಸರು ಬದಲಿಸಲಾಗಿದೆ)ಳನ್ನು ಈ ದಂಪತಿಯ ಒಂದೂವರೆ ವರ್ಷದ ಮಗುವನ್ನು ನೋಡಿಕೊಳ್ಳಲು ನೇಮಿಸಿಕೊಳ್ಳಲಾಗಿತ್ತು. ಜತೆಗೆ ಮನಿಷಾ ಮನೆಯ ಕೆಲಸವನ್ನೂ ಮಾಡುತ್ತಿದ್ದಳು. ಕಾರ್ಯಾಚರಣೆ ವೇಳೆ ಮನೆಯಲ್ಲಿ ಮನಿಷಾ ಮತ್ತು ಮಗು ಮಾತ್ರವಿದ್ದಿತು. ಮನಿಷಾಳನ್ನು ವಿಚಾರಣೆ ನಡೆಸಿದಾಗ ಆಕೆಯ ತಂದೆ ಮತ್ತು ತಾಯಿ ತಮಿಳುನಾಡಿನಲ್ಲಿ ಉಳಿದ ಮೂವರು ಮಕ್ಕಳೊಂದಿಗೆ ವಾಸವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕಾರ್ಮಿಕ ಇಲಾಖೆ ಪ್ರಕರಣ ದಾಖಲಿಸಿದ್ದು, ವಿಚಾರಣೆ ನಡೆಸಲಿದೆ.