ಅತ್ತಾವರ ಮನೆ ಉಗ್ರರ ನೆಲೆ: ಎನ್‌ಐಎಯಿಂದ ಸ್ಫೋಟಕ ವಶ
ಮಂಗಳೂರು: ದೇಶಾದ್ಯಂತ ನಡೆದ ವಿವಿಧ ಸ್ಫೋಟಗಳ ಹಿಂದಿರುವ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ಯಾಸೀನ್ ಭಟ್ಕಳ ಮತ್ತು ಸಹಚರ ಅಸಾದುಲ್ಲಾ ಬೇಗ್ ತಂಗಿದ್ದ ಮಂಗಳೂರು ನಗರದ ಅತ್ತಾವರದ ಅಪಾರ್ಟ್‌ಮೆಂಟ್‌ನಿಂದ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಸ್ಫೋಟಕ ಸಾಮಗ್ರಿಗಳನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.
ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಮಂಗಳೂರಿಗೆ ಉಗ್ರರ ಕರೆತಂದು ವಿಚಾರಣೆ ನಡೆಸಿರುವುದು ನಮ್ಮ ಗಮನಕ್ಕೆ ಬಂದಿಲ್ಲ ಎಂದು ನಗರ ಪೊಲೀಸ್ ಕಮಿಷನರ್ ಮನೀಷ್ ಕರ್ಭೀಕರ್ ಹೇಳಿದ್ದಾರೆ. ಆದರೆ ಎನ್‌ಐಎ ಮಂಗಳೂರಿಗೆ ಸೆ.4ರಂದು ಬಂದು, ಅಸಾದುಲ್ಲ ಎಂಬ ಉಗ್ರನ ಮನೆ ಶೋಧ ನಡೆಸಿರುವುದಾಗಿ ರಾಜ್ಯ ಗುಪ್ತಚರ ಮೂಲಗಳು ಖಚಿತ ಪಡಿಸಿವೆ.
ಯಾಸೀನ್ ಆಗಮನ ವದಂತಿ: ಮಂಗಳೂರಿನ ಅತ್ತಾವರ ಝೇಪಿಯರ್ ಹೈಟ್ಸ್ ಕಟ್ಟಡದ 301ನೇ ಬಾಡಿಗೆ ಮನೆಯಲ್ಲಿ ಅಸಾದುಲ್ಲ ವಾಸವಾಗಿದ್ದ. ಕೆಲ ದಿನಗಳ ಹಿಂದೆ ಎನ್‌ಐಎ ಅಧಿಕಾರಿಗಳು ಮಂಗಳೂರಿಗೆ ಅಸಾದುಲ್ಲ ಬೇಗ್‌ನನ್ನು ಕರೆದುಕೊಂಡು ಬಂದಿದ್ದರು. ಆದರೆ ಯಾಸೀನ್ ಭಟ್ಕಳನನ್ನೇ ಕರೆತಂದಿರುವ ಬಗ್ಗೆ ವದಂತಿ ಹಬ್ಬಿತ್ತು. ನಾಲ್ಕು ಗಂಟೆಗಳ ಕಾಲ ತಪಾಸಣೆ ನಡೆಸಿದ ಅಧಿಕಾರಿಗಳಿಗೆ 50 ಡಿಜಿಟಲ್ ವಾಚ್, ಸರ್ಕ್ಯೂಟ್, ಡಿಟೋನೇಟರ್‌ಗಳು, ಸೆಲ್‌ಫೋನ್‌ಗಳು, ನೈಟ್ರೇಟ್ ಜೆಲ್ ಮೊದಲಾದ ಸಾಮಗ್ರಿ ವಶಕ್ಕೆ ತೆಗೆದುಕೊಂಡಿದ್ದರು.
6 ತಿಂಗಳು ವಾಸ: ಹೈದರಾಬಾದ್ ದಿಲ್‌ಸುಖ್ ನಗರ ಸ್ಫೋಟಕ್ಕೆ ಮುನ್ನ ಮಂಗಳೂರಲ್ಲಿ 6 ತಿಂಗಳ ತಂಗಿದ್ದ ಎನ್ನಲಾಗಿದೆ. ಅಸಾದುಲ್ಲಾ ಬಾಂಬ್ ಇಡುತ್ತಿದ್ದರೆ, ವಕಾಸ್ ಮತ್ತು ಮೋಣಿ ಬಾಂಬ್‌ಗಳನ್ನು ಜೋಡಿಸುವ ವೇಳೆ ಐಇಡಿ ಸರ್ಕ್ಯೂಟ್ ಸಂಪರ್ಕಿಸುವ ಕೆಲಸ ಮಾಡುತ್ತಿದ್ದ.
ಮಂಗಳೂರು ಅಪಾರ್ಟ್‌ಮೆಂಟ್‌ನಲ್ಲಿ ಇರುವಷ್ಟು ದಿನ ವೆಸ್ಟರ್ನ್ ಯೂನಿಯನ್ ಮೂಲಕ ವಿದೇಶದಿಂದ ದೇಣಿಗೆ ಬರುತ್ತಿತ್ತು. ಅಸಾದುಲ್ಲ ಬಂಧನ ವೇಳೆ ಇನ್ನೊಂದು ಸ್ಫೋಟಕ್ಕೆ ಸಿದ್ಧನಾಗುತ್ತಿದ್ದ. ಅಸಾದುಲ್ಲ ಸಿಕ್ಕಿಬಿದ್ದರೆ ಮೋನು ವಕಾಸ್ ನಾಪತ್ತೆಯಾಗಿದ್ದಾರೆ.
2008ರಲ್ಲಿ ಮಂಗಳೂರಲ್ಲಿ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆ ಸಂದರ್ಭ ರಿಯಾಜ್ ಭಟ್ಕಳ, ಈತನ ಅಣ್ಣ ಇಕ್ಬಾಲ್ ಭಟ್ಕಳ ಜತೆ ಯಾಸೀನ್ ಭಟ್ಕಳ್ ಪರಾರಿಯಾಗಿದ್ದ. ವಿಚಿತ್ರ ಎಂದರೆ ಆಗ ಅವರು ತಂಗಿದ್ದು ಪೊಲೀಸ್ ಠಾಣೆ ಪಕ್ಕದ ಸುಭಾಷ್ ನಗರದ ಎರಡು ಮನೆಗಳಲ್ಲಿ. ಉಳ್ಳಾಲ ಮುಕ್ಕಚ್ಚೇರಿ, ಚೆಂಬುಗುಡ್ಡೆ ಪ್ರದೇಶದಲ್ಲಿ.
ಈ ಬಾರಿ ತಪಾಸಣೆ ನಡೆದಿದ್ದು ನಗರ ಮಧ್ಯದ ಅತ್ತಾವರದಲ್ಲಿ. ಅಂದು ಮಂಗಳೂರು ಸ್ಲೀಪಿಂಗ್ ಸೆಲ್ ಎಂಬುದು ಪೊಲೀಸರಿಗೆ ಗೊತ್ತಾಗಿತ್ತು.
2008ರ ವೇಳೆ ಒಟ್ಟು 8ಕ್ಕೂ ಹೆಚ್ಚು ಉಗ್ರರನ್ನು ಬಂಧಿಸಿದ್ದರು. ಮಂಗಳೂರಲ್ಲಿ ಪೊಲೀಸ್ ಇಲಾಖೆ ಇನ್ನೂ ಸ್ಲೀಪಿಂಗ್ ಸೆಲ್‌ನಲ್ಲಿಯೇ ಇದೆ ಎನ್ನುವುದು ಸೋಜಿಗ!