ಕ್ರೀಡಾ ಇಲಾಖೆಗೆ 300 ಕೋಟಿ ಬೇಡಿಕೆ: ಜೈನ್
ಮಂಗಳೂರು: ಕ್ರೀಡಾ ಇಲಾಖೆಗೆ ಬಜೆಟ್ನಲ್ಲಿ ರು. 100 ಕೋಟಿ ಮೀಸಲಿರಿಸಲಾಗಿದೆ. ಆದರೆ ಇಲಾಖೆಗೆ ಹೆಚ್ಚಿನ ಹಣ ಬೇಕಾಗಿರುವುದರಿಂದ ಕನಿಷ್ಠ ರು. 300 ಕೋಟಿ ನೀಡುವಂತೆ ಮುಖ್ಯಮಂತ್ರಿಗೆ ಬೇಡಿಕೆ ಮಂಡಿಸಲಾಗಿದೆ ಎಂದು ರಾಜ್ಯ ಯುವಜನ ಸೇವೆ, ಕ್ರೀಡೆ ಮತ್ತು ಮೀನುಗಾರಿಕೆ ಸಚಿವ ಅಭಯಚಂದ್ರ ಜೈನ್ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಕುಳಾಯಿ ಮತ್ತು ಹೆಜಮಾಡಿಯಲ್ಲಿ ಬಂದರು ನಿರ್ಮಾಣಕ್ಕೆ ಸಂಬಂಧಿಸಿ ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದ್ದು, ನವೆಂಬರ್ ಅಥವಾ ಡಿಸೆಂಬರ್ನಲ್ಲಿ ಶಿಲಾನ್ಯಾಸ ಮಾಡಲಾಗುವುದು. ಕುಳಾಯಿಯಲ್ಲಿ ಬಂದರು ನಿರ್ಮಾಣಕ್ಕೆ ಈಗಾಗಲೇ ಬಜೆಟ್ನಲ್ಲಿ ಅನುದಾನ ನಿಗದಿಪಡಿಸಲಾಗಿದೆ. ಹೆಜಮಾಡಿ ಬಂದರಿಗೆ ಪ್ರಸ್ತಾವನೆ ಕಳುಹಿಸಿಕೊಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿದೇಶದಿಂದ ಬಂದ ಕೂಡಲೇ ಕೇಂದ್ರ ಸರ್ಕಾರದ ಇಲಾಖಾ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ರೂಪುರೇಷೆ ಅಂತಿಮಗೊಳಿಸಿ ಶಿಲಾನ್ಯಾಸ ನಡೆಸಲಾಗುವುದು ಎಂದರು.
ಮೀನುಗಾರರ ಆರ್ಥಿಕತೆಯನ್ನು ಬಲಪಡಿಸುವ ಸಲುವಾಗಿ ಅವರಿಗೆ ವಿವಿಧ ಯೋಜನೆಗಳಲ್ಲಿ ಸಬ್ಸಿಡಿ ನೀಡಲಾಗುತ್ತಿದೆ. ಮೀನುಗಾರಿಕೆಗೆ 250 ಅಶ್ವಶಕ್ತಿ ಯಂತ್ರವನ್ನಷ್ಟೇ ಬಳಸಬಹುದಾಗಿದ್ದು, ಇದನ್ನು 350 ಅಶ್ವಶಕ್ತಿಗೆ ಹೆಚ್ಚಿಸಲಾಗಿದೆ ಎಂದರು.
ಮೂಡುಬಿದಿರೆಯಲ್ಲಿ ಸ್ಟೇಡಿಯಂ: ಮೂಡುಬಿದಿರೆಯಲ್ಲಿ ಸುಸಜ್ಜಿತ ಸ್ಟೇಡಿಯಂ ನಿರ್ಮಾಣಕ್ಕೆ 32 ಎಕರೆ ಜಾಗ ಕಾದಿರಿಸಿ ಯುವಜನಸೇವಾ ಇಲಾಖೆ ಖಾತೆಯಡಿ ವರ್ಗಾವಣೆ ಮಾಡಲಾಗಿದೆ. ಸ್ವರಾಜ್ಯ ಮೈದಾನದಲ್ಲಿ ಹಲವು ಪ್ರಗತಿ ಕಾಮಗಾರಿ ಕೈಗೊಳ್ಳಲಾಗಿದ್ದು, ರು. 15 ಲಕ್ಷ ವೆಚ್ಚದಲ್ಲಿ ಜಿಮ್ ನಿರ್ಮಿಸಲಾಗುವುದು. ಮೂಡುಬಿದಿರೆ ಕ್ರೀಡಾಂಗಣಕ್ಕೆ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಲಾಗುತ್ತಿದೆ. ರಾಜ್ಯದಲ್ಲಿ ಅತಿ ಹೆಚ್ಚು ಕ್ರೀಡಾಳುಗಳು ರೂಪುಗೊಳ್ಳುತ್ತಿರುವ ದ.ಕ.ಜಿಲ್ಲೆಯ ಮೂಡುಬಿದಿರೆಗೆ ಇಂಥದ್ದೊಂದು ಕ್ರೀಡಾಂಗಣದ ಅಗತ್ಯವಿದೆ. ಇಲ್ಲಿ ಕ್ರೀಡಾಳುಗಳಿಗೆ ರಾಷ್ಟ್ರ ಮಟ್ಟದ ಸೌಲಭ್ಯ ಒದಗಿಸಲಾಗುವುದು ಎಂದರು.
ಮಂಗಳೂರು ಮಂಗಳಾ ಕ್ರೀಡಾಂಗಣ ಬಳಿ ಶಟಲ್ ಕೋರ್ಟ್ನ್ನು ಪ್ರತ್ಯೇಕ ನಿರ್ಮಿಸುವ ಬಗ್ಗೆ ನೀಲ ನಕಾಶೆ ಸಿದ್ಧಗೊಳ್ಳುತ್ತಿದೆ. ಈಗಿರುವ ಒಳಾಂಗಣ ಕ್ರೀಡಾಂಗಣ ಪಕ್ಕ ನಿರ್ಮಿಸಲಾಗುತ್ತಿದೆ ಎಂದರು.
ಸಿದ್ಧಾಂತ ಮಂದಿರ ಕಳವು:
ಸ್ಪಂದಿಸದ ಛತ್ತೀಸ್ಗಡ
ಮೂಡುಬಿದಿರೆ ಸಿದ್ಧಾಂತ ಮಂದಿರ ಕಳವು ಪ್ರಕರಣ ಆರೋಪಿಗಳ ವಿಚಾರಣೆಗೆ ಛತ್ತೀಸ್ಗಡ ಸರ್ಕಾರದ ಪೊಲೀಸ್ ಇಲಾಖೆ ಸಹಕಾರ ನೀಡುತ್ತಿಲ್ಲ ಎಂದು ರಾಜ್ಯ ಯುವಜನಸೇವೆ ಮತ್ತು ಕ್ರೀಡಾ ಹಾಗೂ ಮೀನುಗಾರಿಕೆ ಸಚಿವ ಅಭಯಚಂದ್ರ ಜೈನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಲ್ಲಿಂದ ಕೋಟ್ಯಂತರ ಬೆಲೆಬಾಳುವ ಮೂರ್ತಿಯನ್ನು ಆರೋಪಿಗಳು ಛತ್ತೀಸ್ಗಡದ ವ್ಯಕ್ತಿಯೊಬ್ಬರಿಗೆ ಮಾರಿದ್ದಾರೆ ಎನ್ನಲಾಗಿದೆ. ಆದರೆ ಅಲ್ಲಿನ ಪೊಲೀಸರು ನಮ್ಮ ಪೊಲೀಸರಿಗೆ ಸಹಕಾರ ನೀಡದಿರುವುದರಿಂದ ತನಿಖೆಗೆ ಹಿನ್ನಡೆಯಾಗಿದೆ. ಪ್ರಕರಣದ ತ್ವರಿತ ವಿಚಾರಣೆ ನಡೆಸುವಂತೆ ಕೋರಿ ಜೈನ್ ಮಿಲನ್ ಸಂಘಟನೆ ಮುಖ್ಯಸ್ಥರ ಜತೆ ಸೇರಿ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ. ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎನ್ನುವುದು ನಮ್ಮ ಒತ್ತಾಯ ಎಂದರು. ಛತ್ತೀಸ್ಗಡದಲ್ಲಿ ಕಾಂಗ್ರೆಸೇತರ ಸರ್ಕಾರ ಇರುವುದರಿಂದ ಅಲ್ಲಿನ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ.
ಮತ್ತೆ ಮುಖ್ಯಮಂತ್ರಿಗೆ ಒತ್ತಡ ಹಾಕಿ ಪ್ರಧಾನ ಮಂತ್ರಿ ಮೂಲಕ ವಿಚಾರಣೆ ಮುಂದುವರಿಸಲು ಒತ್ತಾಯಿಸಬೇಕಾಗಿದೆ. ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸುವುದು ನಮ್ಮ ಆಗ್ರಹವಾಗಿದೆ ಎಂದರು.