ಮಹಿಳೆ ಜತೆ ಅನುಚಿತ ವರ್ತನೆ: ಬಸ್ ನಿರ್ವಾಹಕಗೆ ಥಳಿತ
ಬಂಟ್ವಾಳ: ಮಹಿಳೆಯೊಬ್ಬರ ಜೊತೆ ಅನುಚಿತವಾಗಿ ವರ್ತಿಸಿದ ಬಸ್ ನಿರ್ವಾಹಕನಿಗೆ ಸಾರ್ವಜನಿಕರು ಥಳಿಸಿದ ಘಟನೆ ಗುರುವಾರ ಬೆಳಗ್ಗೆ ಮೆಲ್ಕಾರ್ ಜಂಕ್ಷನ್‌ನಲ್ಲಿ ಗುರುವಾರ ನಡೆದಿದೆ.
ಮಂಗಳೂರು- ಬಿ.ಸಿ.ರೋಡ್ ಸಂಚರಿಸುವ ಗ್ರಾಮೀಣ ಖಾಸಗಿ ಬಸ್ ನಿರ್ವಾಹಕ ಮಹಮ್ಮದ್ ಧರ್ಮದೇಟು ತಿಂದ ಆರೋಪಿ. ಈತ ಗುರುವಾರ ಬೆಳಗ್ಗೆ ಮಹಿಳೆಯೊಬ್ಬರ ಜೊತೆ ಬಸ್‌ನಲ್ಲಿ ಅನುಚಿತವಾಗಿ ವರ್ತಿಸಿದ್ದು, ಈ ವೇಳೆ ಮಹಿಳೆ ನಿರ್ವಾಹಕನಿಗೆ ಕಪಾಳಮೋಕ್ಷ ಮಾಡಿದ್ದರು. ಬಸ್ಸಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಆಕೆಯ ಪತಿ ಆಕ್ರೋಶಗೊಂಡು ನಿರ್ವಾಹಕನನ್ನು ಬಸ್‌ನಿಂದ ಇಳಿಸಿದ್ದು, ಇತರ ಪ್ರಯಾಣಿಕರು ಹಾಗೂ ಸಾರ್ವಜನಿಕರು ಸೇರಿ ಧರ್ಮದೇಟು ನೀಡಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ಮಹಮ್ಮದ್‌ನನ್ನು ವಶಕ್ಕೆ ತೆಗೆದುಕೊಂಡಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ಮಹಮ್ಮದ್ ಈ ಹಿಂದೆಯೂ ಬಸ್ಸಿನಲ್ಲಿ ಹಲವು ಮಂದಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ವ್ಯಕ್ತವಾಗಿದೆ.
ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ಶಂಕರನಾರಾಯಣ: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಹಿಲಿಯಾಣ ಗ್ರಾಮದ ಆಮ್ರಕಲ್ಲು ಎಂಬಲ್ಲಿ ಬುಧವಾರ ನಡೆದಿದೆ. ಮೃತರು ದೇವಣ್ಣ ನಾಯ್ಕ (43), ಇವರು ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದರು. ಜೊತೆಗೆ ಕೈ ಸಾಲವನ್ನೂ ಮಾಡಿದ್ದರು. ಇದೇ ಕಾರಣಕ್ಕಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಅಡುಗೆ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಪ್ರದೀಪ ನಾಯ್ಕ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ಆತ್ಮಹತ್ಯೆ
ಮಣಿಪಾಲ: ಇಲ್ಲಿನ ಅಲೆವೂರು ಗ್ರಾಮದ ಪ್ರಗತಿನಗರದಲ್ಲಿ ಮಹಿಳೆಯೊಬ್ಬರು ಬುಧವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೇಣುಕಾ (25) ಮೃತರು. ಅವರು ಗದಗ ಜಿಲ್ಲೆಯ ಹೊಳೆಮನ್ನೂರು ಗ್ರಾಮದವರು. ಈ ಬಗ್ಗೆ ಮೃತರ ಪತಿ ಲಿಂಗಪ್ಪ ಜಂಗಣ್ಣವರ್ ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಗಾರಿ: 9 ಮಂದಿ ಸೆರೆ
ಕುಂದಾಪುರ: ಇಲ್ಲಿನ ಬೀಜಾಡಿ ಗ್ರಾಮದ ಮುದ್ದೇರ ಓಣಿ ಎಂಬಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಜುಗಾರಿ ಆಟ ಆಡುತ್ತಿದ್ದ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಪಡೆದ ಕುಂದಾಪುರ ಠಾಣೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಹಾಗೂ ರು. 29,200 ನಗದು, ಆಟಕ್ಕೆ ಬಳಸಿದ ಇತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಂಪತಿಗೆ ಜೀವ ಬೆದರಿಕೆ: ದೂರು
ಕೋಟ: ಇಲ್ಲಿನ ಮೊಳಹಳ್ಳಿ ಗ್ರಾಮದ ಮಾವಿನಕೊಡ್ಲು ಎಂಬಲ್ಲಿ ದಂಪತಿಗೆ ಜೀವ ಬೆದರಿಕೆ ಒಡ್ಡಿದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಆರೋಪಿಗಳಾದ ರಾಮ, ನಾರಾಯಣ, ದಿನೇಶ ಎಂಬವರು ನಾಗ (50) ಮತ್ತು ಅವರ ಪತ್ನಿ ಗಿರಿಜ (45) ಮೇಲೆ ಬುಧವಾರ ರಾತ್ರಿ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವುದಾಗಿ ನಾಗ ಅವರ ಪುತ್ರಿ ವನಜ ನೀಡಿದ ದೂರಿನಂತೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್- ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು
ಮೂಲ್ಕಿ: ಖಾಸಗಿ ಬಸ್ ಹಾಗೂ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಹಳೆಯಂಗಡಿ ಸಮೀಪದ ಪಡುಪಣಂಬೂರು ಕಿರು ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ನಡೆದಿದೆ.
ಬೈಕ್ ಸವಾರ ಮುಕ್ಕ ನಿವಾಸಿ ಕೃಷ್ಣಮೂರ್ತಿ ಭಟ್ (40) ಮೃತರು. ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಖಾಸಗಿ ವೇಗದೂತ ಬಸ್ ಓವರ್‌ಟೇಕ್ ಮಾಡುವ ಭರದಲ್ಲಿ ಮುಕ್ಕದ ಕಡೆಗೆ ಹೋಗುತ್ತಿದ್ದ ಮೋಟಾರ್ ಬೈಕ್‌ಗೆ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಪರಿಣಾಮ ಕೃಷ್ಣಮೂರ್ತಿ ಭಟ್ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂಲ್ಕಿ ಠಾಣೆಯಲ್ಲಿ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.