ವಾಣಿ ಶ್ರೀಧರ್ ಸದಸ್ಯತ್ವ ರದ್ದತಿಗೆ ಆಗ್ರಹ: ಪ್ರತಿಭಟನೆ
ಪುತ್ತೂರು: ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾಗಿ ಬಳಿಕ ಬಿಜೆಪಿ ಬೆಂಬಲದೊಂದಿಗೆ ಅಧ್ಯಕ್ಷರಾದ ಪುತ್ತೂರು ಪುರಸಭೆಯ 10ನೇ ವಾರ್ಡ್‌ನ ಸದಸ್ಯೆ ವಾಣಿ ಶ್ರೀಧರ್ ಅವರ ಅಧ್ಯಕ್ಷತೆ ಮತ್ತು ಸದಸ್ಯತ್ವವನ್ನು ಪಕ್ಷಾಂತರ ಕಾಯಿದೆಯಡಿ ರದ್ದು ಪಡಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ವಾರ್ಡ್‌ನ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಪುತ್ತೂರು ತಾಲೂಕು ಕಚೇರಿ ಮುಂಬಾಗದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಕಾಂಗ್ರೆಸ್ ಪಕ್ಷದ ಮೂಲಕ ಗೆಲವು ಸಾಧಿಸಿದ ವಾಣಿ ಶ್ರೀಧರ್ ಅಧಿಕಾರ ವ್ಯಾಮೋಹದಿಂದ ಬಿಜೆಪಿ ಜೊತೆಗೆ ಸೇರಿಕೊಂಡು ತನ್ನ ಆಯ್ಕೆಗೆ ಕಾರಣಕರ್ತರಾದ ಮತದಾರರನ್ನು ವಂಚಿಸಿದ್ದಾರೆ. ಹಲವು ಭಾರಿ ಸ್ಪರ್ಧಿಸಲು ಅವಕಾಶ ನೀಡಿ ಗೆಲ್ಲಿಸಿದ ಪಕ್ಷಕ್ಕೆ ಮತ್ತು ಕಾರ್ಯಕರ್ತರಿಗೆ ದ್ರೋಹ ಬಗೆದಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ತನ್ನ ವಾರ್ಡ್‌ನಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಸಾಧ್ಯವಾಗದೆ ಆಪರೇಶನ್ ಕಮಲದ ಮೂಲಕ ನಮ್ಮ ಸದಸ್ಯೆಯಾಗಿದ್ದ ವಾಣಿ ಶ್ರೀಧರ್ ಅವರನ್ನು ದತ್ತು ಪಡೆದುಕೊಂಡು ಅಧಿಕಾರ ಗಿಟ್ಟಿಸಿಕೊಂಡಿದ್ದಾರೆ. ಡಿ.ವಿ. ಅವರಿಗೆ ಅಂತಹ ಅಧಿಕಾರದ ಆಶೆಯಿದ್ದರೆ ಆಪರೇಶನ್ ಕಮಲ ನಡೆಸುವ ಬದಲು ಅವರಿಗೇ ಅಧ್ಯಕ್ಷರಾಗಬಹುದಿತ್ತು. ಡಿ.ವಿ. ಅವರ ಹಗರಣಗಳು ಒಂದೊಂದಾಗಿ ಬಹಿರಂಗಗೊಳ್ಳುತ್ತಿದ್ದು ಅವರು ಜೈಲು ಪಾಲಾಗುವ ದಿನ ದೂರವಿಲ್ಲ. ಒಂದೊಮ್ಮೆ ಆಮರೇಶನ್ ಕಮಲಕ್ಕೆ ನಾಂದಿ ಹಾಡಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಸ್ಥಿತಿಯೇ ಡಿ.ವಿ. ಸದಾನಂದ ಗೌಡರಿಗೂ ಬರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರು ತಹಸೀಲ್ದಾರ್ ಅವರ ಮೂಲಕ ರಾಜ್ಯಪಾಲರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್, ಪುರಸಭಾ ಸದಸ್ಯರಾದ ಸೀಮಾ ಗಂಗಾಧರ, ನವೀನ್‌ಚಂದ್ರ ನಾಯ್ಕ, ಅನ್ವರ್ ಖಾಸಿಂ, ದೀಕ್ಷಾ ಪೈ, ಮುಖೇಶ್ ಇದ್ದರು.