ಸ್ವಚ್ಛ ಸುಂದರ ವೆಲೆನ್ಸಿಯ ಅಭಿಯಾನ
ಮಂಗಳೂರು: ರಸ್ತೆ ಬದಿ ತ್ಯಾಜ್ಯ ಎಸೆಯುವ ವಿರುದ್ಧ ಜನರೇ ಸೇರಿ ಸ್ವಚ್ಛ ಸುಂದರ ನಗರಕ್ಕಾಗಿ ಆಂದೋಲನ ನಡೆಸುತ್ತಿದ್ದಾರೆ. ಈ ಮಾದರಿ ಕಾರ್ಯಕ್ರವ ವೆಲೆನ್ಸಿಯಾ 5 ವಾರ್ಡ್‌ಗಳಲ್ಲಿ ನಡೆಯಲಿದೆ. ಎಲ್ಲ ನಾಗರಿಕರು, ಧಾರ್ಮಿಕ ಸಂಸ್ಥೆಗಳು, ವಿದ್ಯಾ ಸಂಸ್ಥೆಗಳು, ಸಂಘಟನೆಗಳು, ಯುವಕ, ಯುವತಿ ಮಂಡಳಿಗಳು, ಕಾರ್ಪೊರೇಟರ್‌ಗಳು ಈ ಅಭಿಯಾನದಲ್ಲಿ ಭಾಗವಹಿಸುವರು ಎಂದು ಸಂಯೋಜಕ ಅರುಣ್ ರೋಡ್ರಿಗಸ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜನ ಜಾಗೃತಿಗಾಗಿ ಸೆ.12ರಿಂದ 14ರವರೆಗೆ ನಂದಿಗುಡ್ಡ, ಜೆಪ್ಪು, ವೆಲೆನ್ಸಿಯಾ, ಸುವರ್ಣ ಲೇನ್, ಕಂಕನಾಡಿ, ಪಂಪ್‌ವೆಲ್, ಉಜ್ಜೋಡಿ, ಗೋರಿಗುಡ್ಡ, ಎಕ್ಕೂರು, ಸೂಟರ್‌ಪೇಟೆಯಲ್ಲಿ ಬೀದಿ ನಾಟಕ ಆಯೋಜಿಸಲಾಗಿದೆ.
ಎರಡನೇ ಹಂತವಾಗಿ ಸೆ.15ರಂದು ಸ್ವಚ್ಛ ಸುಂದರ ವೆಲೆನ್ಸಿಯಾಕ್ಕಾಗಿ ಜೆರೋಸಾ ಶಾಲೆಯಿಂದ ವೆಲೆನ್ಸಿಯಾ ವೃತ್ತ, ಕಂಕನಾಡಿ ವೃತ್ತ, ಪಂಪ್‌ವೆಲ್ ಹಳೆ ರಸ್ತೆ, ಗೋರಿಗುಡ್ಡ, ವೆಲೆನ್ಸಿಯ ಚರ್ಚ್ ವರೆಗೆ 3.3 ಕಿ.ಮೀ. ಜನರು ನಡಿಗೆಯಲ್ಲಿ ಪಾಲ್ಗೊಳ್ಳುವರು.
3ನೇ ಹಂತವಾಗಿ ಸೆ.22ರಂದು ಬೆಳಗ್ಗೆ 9 ಗಂಟೆಯಿಂದ 12 ಗಂಟೆ ವರೆಗೆ ವೆಲೆನ್ಸಿಯಾ ಪರಿಸರದ 5 ವಾರ್ಡ್‌ಗಳಲ್ಲಿ ಗುಂಪುಗಳು ರಸ್ತೆ ಬದಿ ತ್ಯಾಜ್ಯ ತೆಗೆದು ಪರಿಸರ ಸ್ವಚ್ಛಗೊಳಿಸುತ್ತಾರೆ. 4ನೇ ಹಂತದಲ್ಲಿ ವಾರ್ಡ್ ಮಟ್ಟಗಳಲ್ಲಿ ಆಗಾಗ ಸ್ವಚ್ಛತೆ ಸಮಾಲೋಚನೆ ನಡೆಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ವೆಲೆನ್ಸಿಯ ಚರ್ಚ್ ಧರ್ಮಗುರು ಫಾ.ಬೊನವೆಂಚರ್ ನಜರೆತ್, ಎ.ಹಮೀದ್ ಕಂದಕ್, ಕಾರ್ಪೊರೇಟರ್ ಅಪ್ಪಿ, ಲೂವಿಸ್ ಜೆ.ಪಿಂಟೊ ಇದ್ದರು.