ಡಿ.19ರಿಂದ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್
ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ವಿಶ್ವನುಡಿಸಿರಿ ವಿರಾಸತ್- 2013 ಡಿ.19ರಿಂದ 22ರವರೆಗೆ ಮೂಡುಬಿದರೆ ವಿದ್ಯಾಗಿರಿಯಲ್ಲಿ ನಡೆಯಲಿದೆ. 'ಕನ್ನಡ ಮನಸ್ಸು ಅಂದು, ಇಂದು, ಮುಂದು' ಎಂಬ ಮುಖ್ಯ ಪರಿಕಲ್ಪನೆಯಡಿ ಈ ಜಾಗತಿಕ ಸಮ್ಮೇಳನ ನಡೆಯಲಿದೆ. 5 ದಿನಗಳಲ್ಲಿ ದೇಶ, ವಿದೇಶಗಳ 40 ಸಾವಿರ ಪ್ರತಿನಿಧಿಗಳು, 10 ಲಕ್ಷ ಸಾಹಿತ್ಯಾಸಕ್ತರು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಆಳ್ವಾಸ್ ನುಡಿಸಿರಿ ಕನ್ನಡ, ನಾಡು, ನುಡಿ ಸಮ್ಮೇಳನಕ್ಕೆ ದಶಮ ಸಂಭ್ರಮ. ಆಳ್ವಾಸ್ ವಿರಾಸತ್ ರಾಷ್ಟ್ರೀಯ ಉತ್ಸವಕ್ಕೆ 20 ವರ್ಷ ತುಂಬುತ್ತಿರುವ ಸಂಭ್ರಮವನ್ನು ಜತೆಯಾಗಿ ವಿಶ್ವ ಸಮ್ಮೇಳನ ರೂಪದಲ್ಲಿ ಆಚರಿಸುತ್ತಿದ್ದೇವೆ. ಕನ್ನಡ, ನಾಡುನುಡಿಗೆ ವಿಶ್ವ ವ್ಯಾಪ್ತಿಯಲ್ಲಿ ಗೌರವ ತಂದುಕೊಟ್ಟ ಚಿಂತಕರು, ಕವಿಗಳು, ಸಾಹಿತಿಗಳು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಲಾವಿದರು ಭಾಗವಹಿಸುವರು.
ಪರ್ಯಾಯ ವೇದಿಕೆ: ವಿದ್ಯಾಗಿರಿಯ 75 ಎಕರೆ ಜಾಗದಲ್ಲಿ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯುವ ಉತ್ಸವದಲ್ಲಿ ಮುಖ್ಯ ವೇದಿಕೆ ಹೊರತಾಗಿ ಮೂರು ಪರ್ಯಾಯ ವೇದಿಕೆ ರೂಪಿಸಿ, ಕೃಷಿ, ಜಾನಪದ, ವಿದ್ಯಾರ್ಥಿ ಚಿಂತನ ಕಾರ್ಯಕ್ರಮ ನಡೆಸಲಾಗುವುದು. ಮುಖ್ಯ ವೇದಿಕೆಯಲ್ಲದೆ ಇತರ ಹತ್ತು ವೇದಿಕೆಗಳಲ್ಲಿ ಯಕ್ಷಗಾನ, ನಾಟಕ, ಜಾನಪದ, ನೃತ್ಯ, ಸಂಗೀತ, ಬಾಲಪ್ರತಿಭೆ ಮೊದಲಾದ ನಾನಾ ಕಲಾ ಪ್ರಕಾರಗಳು ಪ್ರದರ್ಶನಗೊಳ್ಳಲಿದ್ದು, 5 ಸಾವಿರ ಕಲಾವಿದರು ಪ್ರತಿಭೆ ಪ್ರದರ್ಶಿಸುವರು ಎಂದರು.