ಮಂಗಳೂರು ವಿವಿ ಪದವಿಗೆ ಎನ್ಸಿಸಿ ಪಠ್ಯ
-ವಜ್ರಾಕ್ಷಿ ಬಂಟ್ವಾಳ
ಕ.ಪ್ರ.ವಾರ್ತೆ, ಮಂಗಳೂರು, ಸೆ.21
ಮಂಗಳೂರು ವಿಶ್ವವಿದ್ಯಾಲಯು ರಾಜ್ಯದಲ್ಲಿ ಪ್ರಾಯೋಗಿಕವಾಗಿ ಪದವಿ ಶಿಕ್ಷಣದಲ್ಲಿ ಎನ್ಸಿಸಿಯನ್ನು ಐಚ್ಛಿಕ ವಿಷಯವಾಗಿ ಅಳವಡಿಸಿಕೊಳ್ಳಲು ತೀರ್ಮಾನಿಸಿದ್ದು, ಪಠ್ಯ ಪುಸ್ತಕ ರಚನೆಗೆ ಸಮಿತಿ ರಚಿಸಿದೆ.
ಎನ್ಸಿಸಿ ಗ್ರೂಪ್ ಹೆಡ್ ಕ್ವಾರ್ಟರ್ಸ್ ಅನುಮತಿ ಮೇರೆಗೆ ಪಠ್ಯಕ್ರಮ ರಚಿಸಲು ತೀರ್ಮಾನಿಸಿದ್ದು, ವಿಷಯಕ್ಕೆ ಸಂಬಂಧಿಸಿದಂತೆ ಏಳು ತಜ್ಞರು ಆಯ್ಕೆಗೊಂಡಿದ್ದಾರೆ. ಮಂಗಳೂರು ವಿವಿಯಡಿಯಲ್ಲಿ ಬರುವ 196 ಪದವಿ ಶಿಕ್ಷಣ ಸಂಸ್ಥೆಗಳು 2014-15ನೇ ಸಾಲಿನಲ್ಲಿ ಬಿಎ, ಬಿಕಾಂ, ಬಿಎಸ್ಸಿ ಹಾಗೂ ಹೊಟೇಲ್ ಮ್ಯಾನೇಜ್ಮೆಂಟ್ ಕೋರ್ಸ್ನಲ್ಲಿ ಎನ್ಸಿಸಿ ಕೋರ್ಸನ್ನು ಐಚ್ಛಿಕ ವಿಷಯವಾಗಿ ಪ್ರಾರಂಭಿಸಲಾಗುತ್ತಿದೆ. ಈ ವಿಷಯದಲ್ಲಿ ಸೈನ್ಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಅಭಿವೃದ್ಧಿ, ಸಂವಹನ ವಿಷಯಗಳನ್ನು ಸೇರಿಸಲಾಗುತ್ತದೆ. ವಿದ್ಯಾರ್ಥಿಗಳು ಇನ್ನು ಮುಂದೆ ತಮ್ಮ ವಿದ್ಯಾಭ್ಯಾಸದಲ್ಲಿ ಪಠ್ಯವಾಗಿ ಎನ್ಸಿಸಿಯನ್ನು ಅಳವಡಿಸಿಕೊಂಡು ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ಇದರಲ್ಲಿ ತರಬೇತಿ ಮತ್ತು ಶಿಕ್ಷಣ ಎರಡನ್ನೂ ಅಳವಡಿಸಿಕೊಳ್ಳಲಾಗುತ್ತದೆ. ಎನ್ಸಿಸಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು, ಕೌಶಲ್ಯವನ್ನು ವೃದ್ಧಿಸಲು ಸಹಾಯವಾಗುತ್ತದೆ. ರಕ್ಷಣಾ ಸಂಸ್ಥೆಗಳಾದ ಸೈನಿಕ, ನೌಕಾದಳ, ಪೊಲೀಸ್ ಇಲಾಖೆಯಲ್ಲಿ ಸೇರಿಕೊಳ್ಳಲೂ ಸುಲಭವಾಗುತ್ತದೆ. ಅಲ್ಲದೆ ಎನ್ಸಿಸಿ ಉಪನ್ಯಾಸಕರಾಗಿಯೂ ಕಾರ್ಯನಿರ್ವಹಿಸಬಹುದು.
ಸ್ವಾಯತ್ತ್ತೆಯಲ್ಲಿ ಉಜಿರೆ ಆಯ್ಕೆ: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ರಾಷ್ಟ್ರದಲ್ಲಿ 30 ಸ್ವಾಯತ್ತ ಕಾಲೇಜನ್ನು ಆಯ್ಕೆ ಮಾಡಿದ್ದು, ಇದರಲ್ಲಿ ರಾಜ್ಯದ ಉಜಿರೆ ಎಸ್ಡಿಎಂ ಕಾಲೇಜ್ ಕೂಡ ಸೇರಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಥಮವಾಗಿ 2013-14ನೇ ಸಾಲಿನಲ್ಲಿ ಎನ್ಸಿಸಿಯನ್ನು ಎಸ್ಡಿಎಂ ಕಾಲೇಜಿನಲ್ಲಿ ಐಚ್ಛಿಕ ವಿಷಯವಾಗಿ ಸೇರಿಸಿಕೊಳ್ಳಲಾಗಿದೆ. ಈಗಾಗಲೇ ಒಟ್ಟು 11 ವಿದ್ಯಾರ್ಥಿಗಳು ಬಿಎ, ಬಿಕಾಂ, ಬಿಎಸ್ಸಿನಲ್ಲಿ ಎನ್ಸಿಸಿಯನ್ನು ಆಯ್ಕೆ ಮಾಡಿಕೊಂಡಿದ್ದು, ವಾರದಲ್ಲಿ 3 ಗಂಟೆ ಪ್ರಾಕ್ಟಿಕಲ್ ತರಗತಿ ಹಾಗೂ 3 ಗಂಟೆ ಥಿಯರಿ ಇರುತ್ತದೆ.
ಶೈಕ್ಷಣಿಕ ಪ್ರಥಮ ವರ್ಷದಲ್ಲಿ ಎನ್ಸಿಸಿಯಲ್ಲಿ ಒಟ್ಟು 18 ಯುನಿಟ್ಗಳಿದ್ದು, ಪ್ರಥಮ ಸೆಮಿಸ್ಟರ್ನಲ್ಲಿ 9 ಯುನಿಟ್ಗಳಿರುತ್ತವೆ. ಒಂದು ಸೆಮಿಸ್ಟರ್ಗೆ ಒಟ್ಟು 10 ಪ್ರಾಕ್ಟಿಕಲ್ ತರಗತಿಗಳಿರುತ್ತವೆ.
ಭಾರತೀಯ ರಾಷ್ಟ್ರೀಯ ರಕ್ಷಣಾ ವಿವಿಯಿಂದ ಮಾನ್ಯತೆ ಪಡೆದ ಕಾರ್ಯನಿರತ ಸೇವಾ ಅಧಿಕಾರಿಗಳು ಎನ್ಸಿಸಿ ಉಪನ್ಯಾಸಕರಾಗಲು ಅರ್ಹತೆ ಪಡೆದಿರುತ್ತಾರೆ. ವಿವಿಯಲ್ಲಿ ಒಟ್ಟು 8-10 ಎನ್ಸಿಸಿ ಅಧ್ಯಾಪಕರಿದ್ದು, ಇವರು ಒಟ್ಟು 40 ಕಾಲೇಜಿನಲ್ಲಿ ಬೋಧಿಸಬಹುದು.
-ಪ್ರೊ.ಟಿ.ಸಿ. ಶಿವಶಂಕರ ಮೂರ್ತಿ, ಮಂಗಳೂರು ವಿವಿ ಕುಲಸಚಿವ
ಎನ್ಸಿಸಿ ಶಿಕ್ಷಣ ವಿದ್ಯಾರ್ಥಿಗಳನ್ನು ಸೈನಿಕರಾಗಿ ತರಬೇತಿಗೊಳಿಸಲು ಅಲ್ಲ. ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ಹಾಗೂ ಕೌಶಲ್ಯವನ್ನು ಅಭಿವೃದ್ಧಿಪಡಿಸುವುದೇ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ನಿಗಮದ ಉದ್ದೇಶ. ಮುಂದಿನ ವರ್ಷದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಎನ್ಸಿಸಿ ವಿಷಯವನ್ನು ಆಯ್ಕೆ ಮಾಡುವ ವಿಶ್ವಾಸವಿದೆ.
-ಶ್ರೀಧರ್ ಎನ್ ಭಟ್, ನೌಕಾದಳ ಎನ್ಸಿಸಿ ಅಧಿಕಾರಿ