ಆಸ್ಕರ್ ಫರ್ನಾಂಡಿಸ್ ಅಳಿಯನ ವಿರುದ್ಧ ದೂರು
ಮಂಗಳೂರು: ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚಿಸಿರುವುದಾಗಿ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ಆಸ್ಕರ್ ಫರ್ನಾಂಡಿಸ್ ಅಳಿಯನ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿ.ಸಿ. ರೋಡ್ನ ಕೊರಿಯರ್ ಸಂಸ್ಥೆಯಲ್ಲಿ ಕೆಲಸ ಮಾಡುವ ಪುತ್ತೂರಿನ ನಿವಾಸಿ ಜಗದೀಶ್ ಸಹೋದರಿಗೆ ರಾಷ್ಟ್ರೀಯ ಗೇರು ಬೀಜ ಸಂಶೋಧನಾ ಕೇಂದ್ರದಲ್ಲಿ ಉದ್ಯೋಗ ನೀಡುವುದಾಗಿ ಹೇಳಿ ಆಸ್ಕರ್ ಫರ್ನಾಂಡಿಸ್ ಆಳಿಯ ಆಸ್ಕರ್ ಮೆರಿಡಿಯನ್ 50,000 ಪಡೆದುಕೊಂಡಿದ್ದರು. ಆರಂಭದಲ್ಲಿ 3 ಲಕ್ಷ ನೀಡುವಂತೆ ಒತ್ತಾಯಿಸಿದ್ದ ಮೆರಿಡಿಯನ್ ಮಾತುಕತೆ ನಂತರ 50,000ಕ್ಕೆ ಒಪ್ಪಿಕೊಂಡಿದ್ದರು.
ಜನವರಿಯಲ್ಲಿ ರು. 50,000 ಮೊತ್ತವನ್ನು ಜಗದೀಶ್ ಮತ್ತು ಆಸ್ಕರ್ ಮೆರಿಡಿಯನ್ಗೆ ಗೆಳೆಯನಾಗಿರುವ ಪ್ರೀತಮ್ ಡಿ' ಸೋಜ ಎಂಬವರ ಖಾತೆಗೆ ಜಮೆ ಮಾಡಿದ್ದು, ನಂತರ ಅದನ್ನು ಮೆರಿಡಿಯನ್ ಪಡೆದುಕೊಂಡಿದ್ದರು. ಹಣ ನೀಡಿ 8 ತಿಂಗಳು ಕಳೆದರೂ ಇನ್ನೂ ಕೆಲಸ ನೀಡಿಲ್ಲ. ಅಲ್ಲದೇ ಈ ಹಿಂದೆಯೂ ಉದ್ಯೋಗ ನೀಡುವುದಾಗಿ ಹೇಳಿ 20ಕ್ಕೂ ಹೆಚ್ಚು ಮಂದಿಯಿಂದ ಹಣ ಪಡೆದು ವಂಚಿಸಿದ್ದಾರೆ ಎಂದು ಜಗದೀಶ್ ಮತ್ತು ಪ್ರೀತಮ್ ಡಿ' ಸೋಜ ಪಾಂಡೇಶ್ವರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.