ಪ್ರೀತಿಸಲು ನಿರಾಕರಣೆ: ಭಗ್ನಪ್ರೇಮಿಯಿಂದ ಇರಿತ
ಮಸ್ಕಿ: ಯುವಕನೊಬ್ಬ ತನ್ನನ್ನು ಪ್ರೀತಿಸಲು ನಿರಾಕರಿಸಿದ ಯುವತಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ಪಟ್ಟಣದಲ್ಲಿ ಗುರುವಾರ ನಡೆದಿದೆ.
ಯುವಕನನ್ನು ಪಟ್ಟಣದ ಹಳೇ ಪೊಲೀಸ್ ಠಾಣೆ ಬಳಿಯ ನಿವಾಸಿ ಮಲ್ಲಿಕಾರ್ಜುನ್ ಕೋಡಿಹಾಳ (24)ಎಂದು ಗುರುತಿಸಲಾಗಿದೆ. ಈತ ವರುಣಾ ಎಂಬಾಕೆಯನ್ನು ಪ್ರೀತಿಸುವಂತೆ ಆಗಾಗ್ಗೆ ಪೀಡಿಸುತ್ತಿದ್ದ. ಅದಕ್ಕೆ ಆಕೆ ನಿರಾಕರಿಸಿದ್ದಳು ಎಂದು ಹೇಳಲಾಗಿದೆ. ಅದರಿಂದ ಕೋಪಗೊಂಡ ಆತ, ಆಕೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಯುವತಿಯ ತಲೆ ಹಿಂಭಾಗದಲ್ಲಿ ಗಾಯವಾಗಿದ್ದು ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಸ್ಕಿ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಆರೋಪಿಯ ಶೋಧ ಕಾರ್ಯ ಪೊಲೀಸರು ಆರಂಭಿಸಿದ್ದಾರೆ.
ಯುವತಿ ಶವ ಪತ್ತೆ, ಪ್ರೇಮಿ ನಾಪತ್ತೆ
ಮಂಗಳೂರು: ಹೆತ್ತವರು ಪ್ರೀತಿಗೆ ವಿರೋಧಿಸಿದ ಹಿನ್ನೆಲೆಯಲ್ಲಿ ಪ್ರೇಮಿಯೊಂದಿಗೆ ಮನೆ ಬಿಟ್ಟು ತೆರಳಿದ ಯುವತಿ ಶವವಾಗಿ ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿ ಕಾಲೇಜು ವಿದ್ಯಾರ್ಥಿಗಳು ನಗರದಲ್ಲಿ ಗುರುವಾರ ಪ್ರತಿಭಟಿಸಿದರು.
ಅಡ್ಯಾರ್ ನಿವಾಸಿ ಅಕ್ಷತಾ (18) ಶನಿವಾರ ಮನೆಯಿಂದ ಕಾಲೇಜ್‌ಗೆಂದು ಹೋಗಿ, ನಾಪತ್ತೆಯಾಗಿದ್ದಳು. ಆಕೆಯ ಸಹಪಾಠಿ ಮಂಜೇಶ್ವರ ನಿವಾಸಿ ಮದನ್ ಕೂಡಾ ನಾಪತ್ತೆಯಾಗಿದ್ದ. ಪ್ರೀತಿಸಿ ಮನೆ ಬಿಟ್ಟಿರಬೇಕೆಂದು ಮನೆಯವರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ಚುರುಕುಗೊಳಿಸಿದರು.
ಇದೇ ವೇಳೆ ಮುಳಿಹಿತ್ಲು ಸಮೀಪದ ನದಿಯಲ್ಲಿ ಯುವತಿ ಶವ ಪತ್ತೆಯಾಗಿದ್ದು, ಈ ಬಗ್ಗೆ ಪಾಂಡೇಶ್ವರ ಪೊಲೀಸರು ಎಲ್ಲ ಠಾಣೆಗಳಿಗೂ ಮಾಹಿತಿ ರವಾನಿಸಿದ್ದರು.
ಅಕ್ಷತಾ ಪೋಷಕರೂ ಶವವನ್ನು ಪರೀಕ್ಷಿಸಿದ್ದು, ಇದು ಅವರ ಮಗಳದ್ದೇ ಎಂದು ಗುರುತಿಸಿದ್ದಾರೆ. ಈಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಜೊತೆಯಲ್ಲಿದ್ದ ಮದನ್ ಎಲ್ಲಿ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಈ ಸಂಬಂಧವಾಗಿ ತನಿಖೆ ಮುಂದುವರಿದಿದೆ.