ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಂಗ್ಳೂರು ಉಗ್ರರ ಅಡ್ಡೆ, ಜನಪ್ರತಿನಿಧಿಗಳ ಅಸಡ್ಡೆ

ಮಂಗಳೂರು ಉಗ್ರರ ತಾಣ, ಇದನ್ನು ಸ್ವತಃ ಇಂಡಿಯನ್ ಮುಜಾಹಿದ್ದೀನ್ ಸಹಸಂಸ್ಥಾಪಕ ಯಾಸೀನ್ ಭಟ್ಕಳ ಬಾಯಿ ಬಿಟ್ಟ ಸತ್ಯ. ಇನ್ನೊಂದು ಮುಚ್ಚಿಟ್ಟ ಸತ್ಯ ಏನೆಂದರೆ...

Srinivasa Murthy VN
Updated On : 27 Sept 2013, 1:32 am

ಮಂಗಳೂರು: ಮಂಗಳೂರು ಉಗ್ರರ ತಾಣ, ಇದನ್ನು ಸ್ವತಃ ಇಂಡಿಯನ್ ಮುಜಾಹಿದ್ದೀನ್ ಸಹಸಂಸ್ಥಾಪಕ ಯಾಸೀನ್ ಭಟ್ಕಳ ಬಾಯಿ ಬಿಟ್ಟ ಸತ್ಯ. ಇನ್ನೊಂದು ಮುಚ್ಚಿಟ್ಟ ಸತ್ಯ ಏನೆಂದರೆ ಉಗ್ರರನ್ನು ಬೆನ್ನಟ್ಟಿ ಸೆರೆ ಹಿಡಿದಿದ್ದ ಪೊಲೀಸ್ ಅಧಿಕಾರಿಗಳನ್ನು ಕಾರ್ಯೇತರ ವಿಭಾಗಕ್ಕೆ ವರ್ಗ ಮಾಡಲಾಗಿದೆ.
ಸಿಸಿಬಿ ಇನ್ಸ್‌ಪೆಕ್ಟರ್ ಡಾ. ಎಚ್.ಎನ್. ವೆಂಕಟೇಶ್ ಪ್ರಸನ್ನ ಎರಡು ವರ್ಷ ಕರ್ತವ್ಯ ಪೂರೈಸುವ ಮುನ್ನವೇ ನಗರ ಅಪರಾಧ ಗುಪ್ತವಾರ್ತೆ ದಳದಿಂದ ವರ್ಗಾಯಿಸಲಾಗಿದೆ. ಡಿವೈಎಸ್‌ಪಿ ಜಯಂತ್ ವಿ. ಶೆಟ್ಟಿ ಅವರನ್ನು ಡಿಸಿಆರ್‌ಬಿಗೆ ಹಾಕಲಾಗಿದೆ.
2008ರ ಅ.3ರಂದು ಮುಂಬೈ ಪೊಲೀಸ್ ಸಹಕಾರದೊಂದಿಗೆ ಜಿಲ್ಲಾ ಅಪರಾಧ ಗುಪ್ತವಾರ್ತೆದಳದಲ್ಲಿದ್ದ ವೇಳೆ ಇನ್ಸ್‌ಪೆಕ್ಟರ್ ವೆಂಕಟೇಶ್ ಪ್ರಸನ್ನ, ಉಳ್ಳಾಲ ಡಿವೈಎಸ್‌ಪಿ ಆಗಿದ್ದ ಜಯಂತ್ ವಿ.ಶೆಟ್ಟಿ ಆಪರೇಷನ್ ಕಾರ್ಯಾಚರಣೆಯಲ್ಲಿ ಉಗ್ರರನ್ನು ಬಂಧಿಸುವಲ್ಲಿ ಮುಂಚೂಣಿಯಲ್ಲಿದ್ದರು. ಮೊಟ್ಟ ಮೊದಲ ಬಾರಿಗೆ ಇಂಡಿಯನ್ ಮುಜಾಹಿದ್ದೀನ್ ಉಗ್ರರು ಮಂಗಳೂರಲ್ಲಿ ಸ್ಲೀಪಿಂಗ್ ಸೆಲ್ ತೆರೆದ ವಿಚಾರ ಬಹಿರಂಗವಾಗಿತ್ತು. ದೇಶಾದ್ಯಂತದ ಸ್ಫೋಟಗಳಿಗೆ ಸ್ಫೋಟಕ ಒಯ್ದ ಇಬ್ಬರು ಆರೋಪಿಗಳು ಮತ್ತು ಆಶ್ರಯ ನೀಡಿದ ಇಬ್ಬರು ಬಂಧಿತರಾಗಿದ್ದರು. ಬಳಿಕ ರಿಯಾಜ್ ಭಟ್ಕಳ ಜತೆ ಚಾಲಕನಾಗಿ ಕೆಲಸ ಮಾಡಿದವರು ಮತ್ತಿತರ ಸಹವರ್ತಿಗಳನ್ನು ಡಿಸಿಐಬಿ ಇನ್ಸ್‌ಪೆಕ್ಟರ್ ಡಾ. ಎಚ್.ಎನ್. ವೆಂಕಟೇಶ್ ಪ್ರಸನ್ನ ಬಂಧಿಸಿದ್ದರು. ರಿಯಾಜ್ ಭಟ್ಕಳನಿಗೆ ಶಿಕಾರಿಪುರದಲ್ಲಿ ಆಶ್ರಯ ನೀಡಿದ್ದ ಆರೋಪಿಗಳನ್ನು ಡಿವೈಎಸ್‌ಪಿ ಸುಭಾಶ್ಚಂದ್ರ ಬಂಧಿಸಿದ್ದರು.

ವರ್ಗಾವಣೆ: ಇಂಡಿಯನ್ ಮುಜಾಹಿದ್ದೀನ್ ಉಗ್ರರ ಕಾರ್ಯಾಚರಣೆ ಕಡತಗಳನ್ನು ಸಿದ್ಧಪಡಿಸಿ, ಈ ಬಗ್ಗೆ ಸಮಗ್ರ ಮಾಹಿತಿ ಇರುವ ಇನ್ಸ್‌ಪೆಕ್ಟರ್ ವೆಂಕಟೇಶ್ ಪ್ರಸನ್ನ ಅವರನ್ನು ಆಯಕಟ್ಟಿನ ಸಿಸಿಬಿಯಿಂದ ಸಿಆರ್ ಸೆಲ್‌ಗೆ ವರ್ಗಾಯಿಸಲಾಗಿದೆ. ಅಲ್ಲಿ ಪರಿಶಿಷ್ಟ ಜಾತಿ, ಪಂಗಡದ ದೂರು, ದೌರ್ಜನ್ಯಗಳ ದೂರು ಸಂಗ್ರಹಿಸಿ ಲೆಕ್ಕ ಇಡುವ ಅಧಿಕಾರೇತರ (ನಾನ್ ಎಕ್ಸಿಕ್ಯೂಟಿವ್) ಕೆಲಸ!
ಉಗ್ರರ ಬಗ್ಗೆ ಉಭಯ ಜಿಲ್ಲೆಗಳಲ್ಲಿ ಹೆಚ್ಚಿನ ಮಾಹಿತಿ ಇರುವ ಡಿವೈಎಸ್‌ಪಿ ಜಯಂತ್ ವಿ. ಶೆಟ್ಟರನ್ನು ಜಿಲ್ಲೆಯಿಂದಲೇ ವರ್ಗಾಯಿಸಲಾಗಿತ್ತು. ಬಳಿಕ ಇದೀಗ ಕಾರ್ಯೇತರ ವಿಭಾಗ ಜಿಲ್ಲಾ ಅಪರಾಧ ದಾಖಲೆ ವಿಭಾಗ ವರ್ಗ ಮಾಡಲಾಗಿದೆ. ಅಲ್ಲಿ ಅಪರಾಧ ಅಂಕಿ, ಅಂಶ ಸಂಗ್ರಹಿಸುವ ಕೆಲಸ. ಇನ್ನೊಬ್ಬರು ಎಸಿಪಿ ಸುಭಾಶ್ಚಂದ್ರ ವಯೋ ನಿವೃತ್ತಿಯಾಗಿದ್ದಾರೆ.

ರಾಜಕೀಯ ಬೆಂಬಲ: ಮಂಗಳೂರು ನಗರದ ಅಪರಾಧ ಗುಪ್ತವಾರ್ತೆ ದಳ ಇನ್ಸ್‌ಪೆಕ್ಟರ್ ಆಗಿ ವೆಲೆಂಟೇನ್ ಡಿಸೋಜ ವರ್ಗವಾಗಿದೆ. ಇವರಿಗೆ ಕೇಂದ್ರ ಭೂ ಸಾರಿಗೆ ಸಚಿವ ಆಸ್ಕರ್ ಫರ್ನಾಂಡಿಸ್ ಮತ್ತು ಶಾಸಕ ಜೆ.ಆರ್. ಲೋಬೊ ಬೆಂಬಲ ಲಭಿಸಿದ್ದರಿಂದ ಆಯಕಟ್ಟಿನ ಜಾಗ ಲಭಿಸಿದೆ ಎನ್ನಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಅಪರಾಧ ಗುಪ್ತವಾರ್ತೆ ದಳದ ಇನ್ಸ್‌ಪೆಕ್ಟರ್ ಆಗಿ ಬಶೀರ್ ಆಹಮ್ಮದ್ ವರ್ಗವಾಗಿದ್ದಾರೆ. ಇವರ ಬೆನ್ನಿಗೆ ಸುರತ್ಕಲ್ ಶಾಸಕ ಮೊಯ್ದಿನ್ ಬಾವ ಇದ್ದಾರೆ.

ಉಗ್ರರ ಅಡ್ಡೆ: ಜನಪ್ರತಿನಿಧಿಗಳ ಅಸಡ್ಡೆ
ಮಂಗಳೂರಿನ ಕಮಿಷನರೇಟ್ ಪಕ್ಕದ ಸುಭಾಷ್‌ನಗರದಲ್ಲಿ ಉಗ್ರರು ತಮ್ಮ ಅಡ್ಡಾ ಮಾಡಿಕೊಂಡಿದ್ದರು. ವೈದ್ಯಕೀಯ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಅತ್ತಾವರದ ಅಪಾರ್ಟ್‌ಮೆಂಟ್‌ನಲ್ಲಿ ವಿದ್ಯಾರ್ಥಿಗಳ ಸೋಗಿನಲ್ಲಿ ಪಾಕ್ ಪ್ರಜೆಯೂ ಸಹಿತ ಇಂಡಿಯನ್ ಮುಜಾಹಿದ್ದೀನ್ ಉಗ್ರರು ವಾಸವಾಗಿದ್ದರು. ನಗರ ಸುತ್ತಮುತ್ತಲೂ ದೇಶದ ಮೋಸ್ಟ್ ವಾಂಟೆಡ್ ಭಯೋತ್ಪಾದಕರು ಸುತ್ತಾಡಿ ಸಂಚು ನಡೆಸಿದ ಸುದ್ದಿ ಮಾಧ್ಯಮದಲ್ಲಿ ಹರಿದಾಡುತ್ತಿದ್ದರೂ ಕಾಂಗ್ರೆಸ್ ಸರ್ಕಾರದಲ್ಲಿರುವ ಸ್ಥಳೀಯ ಸಚಿವರ್ಯಾರು ಪೊಲೀಸ್ ಅಧಿಕಾರಿಗಳ ಬಳಿ ವಿಚಾರಿಸಿಲ್ಲ. ಉಗ್ರರ ಪತ್ತೆಯಾಗಿ 5 ವರ್ಷ ಕಳೆದರೂ ಮಂಗಳೂರಲ್ಲಿ ಬಾಂಬ್ ಪತ್ತೆಗೆ ಸ್ಕ್ವಾಡ್ ರಚಿಸಿಲ್ಲ. ಉಗ್ರರ ಮೇಲೆ ಕಣ್ಣಿಡಲು ಸ್ಕ್ವಾಡ್ ರಚಿಸಿಲ್ಲ. ಬದಲಾಗಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದವರನ್ನು ಕಾರ್ಯೇತರ ವಿಭಾಗಕ್ಕೆ ವರ್ಗಾಯಿಸಿದ್ದಾರೆ.

ಡಾನ್ ಬೆದರಿಕೆಗೆ ಮಣಿಯಿತೇ?

ಕ್ರಿಮಿನಲ್‌ಗಳ ವಿರುದ್ಧ ಕೆಲಸ ಮಾಡುತ್ತಾರೆ ಎಂಬ ಕಾರಣಕ್ಕೆ ಭೂಗತ ಡಾನ್ ದಾವೂದ್ ಇಬ್ರಾಹಿಂ ಸಹಚರ ರಶೀದ್ ಮಲಬಾರಿ, ಇನ್ಸ್‌ಪೆಕ್ಟರ್ ವೆಂಕಟೇಶ್ ಪ್ರಸನ್ನಗೆ ಬೆದರಿಕೆ ಕೂಡಾ ಹಾಕಿದ್ದ. ಆದರೆ ಹಿತೈಷಿಗಳು, ಸಂಘ, ಸಂಸ್ಥೆಗಳ ಮುಖಂಡರು ಕರೆ ಮಾಡಿ ವಿಚಾರಣೆ ನಡೆಸಿದ್ದು ಬಿಟ್ಟರೆ, ಯಾವುದೇ ಹಿರಿಯ ಪೊಲೀಸ್ ಅಧಿಕಾರಿಗಳು ಒಂದೇ ಒಂದು ಮಾತು ಆಡಿಲ್ಲ. ಇದೀಗ ಡಾನ್ ಬೆದರಿಕೆಗೆ ಮಣಿದು ಸರ್ಕಾರವೇ ವರ್ಗ ಮಾಡಿತೇ ಎಂಬ ಪ್ರಶ್ನೆ ಮೂಡಿದೆ!

- ಜಿತೇಂದ್ರ ಕುಂದೇಶ್ವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement