ವಿಚಾರಣೆಗೆ ಉಗ್ರರ ಕರೆತಂದ ದೆಹಲಿ ಪೊಲೀಸರ ತಂಡ
ಮಂಗಳೂರು: ಅತ್ತಾವರದಲ್ಲಿ ತಂಗಿ ಸ್ಫೋಟಗಳಿಗೆ ಬಾಂಬ್ ಪೂರೈಸುತ್ತಿದ್ದ ಪಾಕಿಸ್ತಾನದ ವಾಕಾಸ್ ಮತ್ತು ತಹಸೀನ್ ಅಕ್ತರ್ನನ್ನು ದೆಹಲಿ ಪೊಲೀಸರು ವಿಚಾರಣೆಗೆ ಮಂಗಳೂರಿಗೆ ಕರೆತಂದಿದ್ದಾರೆ. ದೆಹಲಿಯ 10 ಮಂದಿ ಪೊಲೀಸ್ ತಂಡ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ಮಂಗಳವಾರ ಮಧ್ಯಾಹ್ನ ಆಗಮಿಸಿದೆ. ಅಲ್ಲಿಂದ ಅತ್ತಾವರದ ಜುಬೇರ್ ಹೈಟ್ ಅಪಾರ್ಟ್ಮೆಂಟ್ಗೆ ಆಗಮಿಸಿ, ಉಗ್ರರು ತಂಗಿದ್ದ ಮನೆಯನ್ನು ತಪಾಸಣೆ ನಡೆಸಿದರು.
ಇದೇ ಮನೆಯಿಂದ ಆನೇಕ ಬಾಂಬ್ಗಳು, ಬಾಂಬ್ ಉತ್ಪಾದಿಸುವ ಸಲಕರಣೆಗಳನ್ನು ದೆಹಲಿ ಪೊಲೀಸರು ಈ ಹಿಂದೆ ಜಫ್ತಿ ಮಾಡಿದ್ದರು. ಇಂಡಿಯನ್ ಮುಜಾಹಿದ್ದೀನ್ ಉಗ್ರ ಯಾಸಿನ್ ಭಟ್ಕಳ್ನ ಸಹವರ್ತಿಗಳಾಗಿದ್ದ ವಾಕಾಸ್ ಮತ್ತು ಅಕ್ತರ್ ಅತ್ತಾವರದ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು. ಯಾಸಿನ್ ಬಂಧನದ ಸುದ್ದಿ ಬಳಿಕ ಅವರು ಅಲ್ಲಿಂದ ಜಾಗ ಖಾಲಿ ಮಾಡಿದ್ದರು.