ಅಕ್ರಮ ಪ್ರವೇಶ: ಶ್ರೀಲಂಕಾ 16 ಮೀನುಗಾರರ ಸೆರೆ
ಮಂಗಳೂರು: ಭಾರತದ ಗಡಿ ಪ್ರವೇಶಿಸಿ ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿದ್ದ ಶ್ರೀಲಂಕಾ ಮೂಲದ ಹಡಗನ್ನು ಭಾರತೀಯ ನೌಕಾಪಡೆಯ ರಾಜ್‌ದೂತ್ ನೌಕೆಯ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಶ್ರೀಲಂಕಾದ ಕೊಲಂಬೋ ಮರೈನ್ ಹಡಗಿನಲ್ಲಿದ್ದ 16 ಮಂದಿ ಶ್ರೀಲಂಕಾ ಮೀನುಗಾರರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ನವಮಂಗಳೂರು ಬಂದರಿನ 188 ನಾಟಿಕಲ್ ಮೈಲ್ ದೂರದ ಲಕ್ಷದ್ವೀಪ ಸಮೀಪ ಚೆರಿಯಪಾಣಿ ಎಂಬಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಶ್ರೀಲಂಕಾ ಹಡಗು ಅಕ್ರಮವಾಗಿ ಭಾರತೀಯ ಕಡಲ ತೀರ ಪ್ರವೇಶಿಸಿದೆ ಎಂಬ ಮುಂಬೈ ನೌಕಾಪಡೆಯ ಮಾಹಿತಿ ಆಧಾರದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಹಡಗಿನಲ್ಲಿದ್ದ 1.20 ಲಕ್ಷ ಮೌಲ್ಯದ ಮೀನು, 16 ಗ್ಯಾಸ್ ಸಿಲಿಂಡರ್, ವೈರ್‌ಲೆಸ್, ಡೈವಿಂಗ್ ಸಾಧನ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಕೋಸ್ಟ್‌ಗಾರ್ಡ್ ಡಿಐಜಿ ರಾಜಮಣಿ ಶರ್ಮಾ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ಸ್ಥಳೀಯ ಕೋಸ್ಟ್‌ಗಾರ್ಡ್ ಅಧಿಕಾರಿಗಳು, ಸಿಬ್ಬಂದಿ ಜತೆ ಸಂತ ಆಂತೋನಿ ಹಡಗು ಕೂಡ ಕಾರ್ಯಾಚರಣೆಯಲ್ಲಿ ಸಹಕರಿಸಿತ್ತು. ಬಂಧಿತ 16 ಮಂದಿಯನ್ನು ಮಂಗಳೂರಿಗೆ ಕರೆತರಲಾಗಿದ್ದು, ಅವರ ವಿಚಾರಣೆ ನಡೆಸಲಾಗುತ್ತಿದೆ ಎಂದರು. ಅಧಿಕಾರಿಗಳಾದ ಆರ್.ಎಂ.ಶರ್ಮಾ, ಅನುಪಮ್ ರೈ ಇದ್ದರು.