ಹಿಂದುತ್ವಕ್ಕಾಗಿ ಮಠಾಧಿಪತಿ ರಾಜಕೀಯ!
-ಜಿತೇಂದ್ರ ಕುಂದೇಶ್ವರ
ಮಂಗಳೂರು: 22 ಕ್ರಿಮಿನಲ್ ಕೇಸ್, 8 ಬಾರಿ ಜೈಲು ವಾಸ. ಇಂಥವರಿಗೆ ರಾಜಕೀಯ ಪಕ್ಷದ ಗೌರವಾಧ್ಯಕ್ಷ ಪಟ್ಟ... ಈಗ ಹೇಳಲು ಹೊರಟಿರುವುದು ಡಾನ್ಗಳ ಕುರಿತಲ್ಲ. ಉಗ್ರ ಹಿಂದುತ್ವಕ್ಕಾಗಿ ಹೋರಾಡುವ ಮಠಾಧಿಪತಿ ಬಗ್ಗೆ!
ಇವರು ಕೇರಳ ವಯನಾಡ್ ಮಠ ಮತ್ತು ಹಾವೇರಿ ರಾಣಿಬೆನ್ನೂರಲ್ಲಿ ಶರಣಬಸವೇಶ್ವರ ಮಠದ ಪೀಠಾಧಿಪತಿ ಶ್ರೀ ಪ್ರಣವಾನಂದ ಸ್ವಾಮೀಜಿ. ಅಖಿಲಭಾರತ ಹಿಂದು ಮಹಾ ಸಭಾ ಎಂಬ ರಾಜಕೀಯ ಪಕ್ಷದ ಗೌರವಾಧ್ಯಕ್ಷರಾಗಿ ಕರ್ನಾಟಕದಲ್ಲಿ ಖಡ್ಗ ದೀಕ್ಷೆ ನೀಡಿ ಮತ್ತು ಬೆನ್ನಿಹಿನ್ ಪ್ರತಿಭಟನೆಗಾಗಿ ಸೀಮೆಎಣ್ಣೆ ಸುರಿದುಕೊಂಡಾಗ ಈ ಸ್ವಾಮೀಜಿ ರಾಜ್ಯದಲ್ಲಿ ಪ್ರಸಿದ್ಧಿಗೆ ಬಂದಿದ್ದರು. ಆದರೆ, ಇದೀಗ ಬೆಂಕಿ ಚೆಂಡು ಪಕ್ಷವನ್ನೇ ಸುಡುವ ಹೆದರಿಕೆಯಿಂದ ಹಿಂದು ಮಹಾಸಭಾ ಗೌರವಾಧ್ಯಕ್ಷ ಸ್ಥಾನದಿಂದ ಸ್ವಾಮೀಜಿಗೆ ಕೊಕ್ ನೀಡಲಾಗಿದೆ.
1882ರಲ್ಲಿ ಲಾಲಾ ಲಜಪತರಾಯರು ಪಂಜಾಬ್ ಪ್ರಾಂತ್ಯದಲ್ಲಿ ಆರಂಭಿಸಿದ ಸಂಘಟನೆ 1915ರಲ್ಲಿ ಅಖಿಲ ಭಾರತ ಹಿಂದು ಮಹಾ ಸಭಾ ರಾಜಕೀಯ ಸಂಘಟನೆಯಾಗಿ ನೋಂದಣಿಯಾಗಿತ್ತು. ರಾಜನೀತಿಯನ್ನು ಹಿಂದುತ್ವಗೊಳಿಸಿ ಎಂಬ ಧ್ಯೇಯವಾಕ್ಯದೊಡನೆ ಹೋರಾಡುತ್ತಿರುವ ಪಕ್ಷ, ಈಗ ನಾಮ್ಕೇವಾಸ್ತೆ ರೂಪದಲ್ಲಿದೆ. ದೇಶದಲ್ಲಿ ಒಟ್ಟು 22 ಕಡೆ ಸ್ಪರ್ಧಿಸುತ್ತಿದ್ದು, ನರೇಂದ್ರ ಮೋದಿ ಪ್ರಧಾನಿ ಆಗಲು ರಾಜ್ಯದಲ್ಲಿ ಬಿಜೆಪಿಗೆ ಬೆಂಬಲ ನೀಡಿದೆ.
ಈ ಪಕ್ಷಕ್ಕೆ ಶ್ರೀಪ್ರಣವಾನಂದ ಸ್ವಾಮೀಜಿ ಗೌರವಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಆದರೆ, ವಿವಾದಾತ್ಮಕ ಮತ್ತು ಪ್ರಚೋದನಕಾರಿ ಹೇಳಿಕೆಗಳು ರಾಜಕೀಯ ಪಕ್ಷಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗದೆ ರಾಜಿನಾಮೆ ಕೇಳಿದ್ದು, ಇದೀಗ ಪಕ್ಷದ ಗೌರವಾಧ್ಯಕ್ಷ ಸ್ಥಾನದಿಂದ ಮುಕ್ತಿ ನೀಡಲಾಗಿದೆ ಎಂದು ಮಹಸಭಾ ಅಧ್ಯಕ್ಷ ಶ್ರವಣ್ ಕುಮಾರ್ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ವಿವಾದಗಳ ಸರಮಾಲೆ: ಗೋಹತ್ಯೆ ವಿರೋಧ, ಮದನಿ ಚಿಕಿತ್ಸೆ ವಿರೋಧ, ಯಾಸೀನ್ ಭಟ್ಕಳ್, ರಿಯಾಜ್ ಭಟ್ಕಳ್ನಂಥ ಉಗ್ರಗಾಮಿಗಳನ್ನು ಸಾಲಾಗಿ ನಿಲ್ಲಿಸಿ ಗುಂಡಿಕ್ಕುವಂತೆ ವಿವಾದಾತ್ಮಕ ಹೇಳಿಕೆ ನೀಡಿರುವ ಸ್ವಾಮೀಜಿ ವಿರುದ್ಧ 22 ಪ್ರಕರಣಗಳಿವೆ. ಶಾದಿಭಾಗ್ಯ ವಿರುದ್ಧದ ಹೋರಾಟ ಸಂದರ್ಭದಲ್ಲಿ ಹಿಂದು ಯುವಕರು ಮುಸ್ಲಿಂ ಹುಡುಗಿಯರ ಮದುವೆ ಆಗಲಿ ಎಂಬ ಹೇಳಿಕೆ ನೀಡಿದ್ದರು. ಈ ಬಗ್ಗೆ ಹಾವೇರಿ, ಹುಬ್ಬಳ್ಳಿ, ದಾವಣಗೆರೆ, ಧಾರಾವಾಡ, ಬೆಂಗಳೂರು ಕಲಾಸಿಪಾಳ್ಯದಲ್ಲಿ ಪ್ರಕರಣ ದಾಖಲಾಗಿದೆ. ಖಡ್ಗ ದೀಕ್ಷೆ ಕುರಿತು ಮಂಗಳೂರು ಸೇರಿ ನಾಲ್ಕು ಕಡೆ ಕೇಸ್ ದಾಖಲಾಗಿದೆ.
ಬಾಣಲೆಯಿಂದ ಬೆಂಕಿಗೆ!: ಹಿಂದು ಮಹಾ ಸಭಾ ಗೌರವಾಧ್ಯಕ್ಷ ಹುದ್ದೆ ಹೋದ ಬಳಿಕ ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ ಗೌರವಾಧ್ಯಕ್ಷರಾಗಿರುವ ಅಖಿಲ ಭಾರತ ಕ್ರಾಂತಿ ಸೇನಾ ರಾಷ್ಟ್ರೀಯ ಉಸ್ತುವಾರಿ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ರಾಜಿನಾಮೆ ನೀಡಿದ ಬಳಿಕ ರಾಜ್ಯ ದಲ್ಲಿರುವ 12 ಅಖಿಲಭಾರತ ಹಿಂದು ಮಹಾ ಸಭಾ ಶಾಖೆಗಳು ನನ್ನ ಜತೆ ಬಂದಿವೆ ಎಂದು ಸ್ವಾಮಿ ಹೇಳಿಕೊಂಡಿದ್ದಾರೆ.
ಎಂಬಿಎ ಪದವೀಧರ: 2005ರಲ್ಲಿ ಹಿಮಾಲಯದಲ್ಲಿ ಸನ್ಯಾಸ ದೀಕ್ಷೆ ಪಡೆದ ಬಳಿಕ ದುಬೈಯಲ್ಲಿ ಎಂಬಿಎ ಅಧ್ಯಯನ, ಕಂಪ್ಯೂಟರ್ ಡಿಪ್ಲೊಮಾ ಮಾಡಿರುವ ಸ್ವಾಮೀಜಿಗೆ ಈಗ 28 ವರ್ಷ.
ಕೇರಳ ವಯನಾಡ್ ಮೂಲ ಮಠ, ಸಿಂಗಾಪುರ, ಮಲೇಷ್ಯಾದಲ್ಲಿ ಶಾಖೆಗಳಿವೆ ಎಂದು ಇವರು ಹೇಳುತ್ತಾರೆ. ಕೇರಳ ಮೂಲದ ಈ ಸ್ವಾಮೀಜಿಯ ಮಾತೃಭಾಷೆ ಮಲೆಯಾಳಂ. ಕನ್ನಡ ಕಲಿತು ನಿರರ್ಗಳವಾಗಿ ಮಾತನಾಡುತ್ತಾರೆ.
ಹಿಂದುತ್ವ ಮತ್ತು ರಾಷ್ಟ್ರೀಯತೆ ಹೋರಾಟಗಳಿಗಾಗಿ ನಾನು 8 ಸಲ ಜೈಲ್ಗೆ ಹೋಗಿದ್ದೆ. ಮಾಲೆಗಾಂವ್ ಸ್ಫೋಟ ವಿಚಾರಣೆಗೆ ದಿಲ್ಲಿಗೆ ಕರೆಸಿದ್ದರು. ದಿಲ್ಲಿಯಲ್ಲಿ 4 ದಿನ ವಿಚಾರಣೆ ಮಾಡಿದರು, ನನ್ನ ಕೈವಾಡ ಇಲ್ಲ ಎಂದು ಗೊತ್ತಾಗಿಬಿಟ್ಟು ಬಿಟ್ಟರು.
- ಶ್ರೀ ಪ್ರಣವಾನಂದ ಸ್ವಾಮೀಜಿ