ಚರ್ಚೆಗೊಳಗಾಗುವ ಕೃತಿ ಶ್ರೇಷ್ಠ: ತಿರುಮಲೇಶ್
ಕಾಂತಾವರ: ಯಾವುದು ಸಾಮಾಜಿಕವಾಗಿ ಮುಖ್ಯವೆನಿಸಿ ಚರ್ಚೆಗೊಳಗಾಗುತ್ತದೋ ಅಂತಹ ಕೃತಿ ಶ್ರೇಷ್ಠವೆನಿಸುತ್ತದೆ ಎಂದು ಸಾಹಿತಿ ಕೆ.ವಿ. ತಿರುಮಲೇಶ್ ಅಭಿಪ್ರಾಯಪಟ್ಟಿದ್ದಾರೆ. ಮೊಗಸಾಲೆ ಪ್ರಕಾಶನದಿಂದ ಪ್ರಕಟಗೊಂಡ ಡಾ.ನಾ. ಮೊಗಸಾಲೆ ಆಯ್ದ ಕವನಗಳ ಸಂಪುಟ ಪೂರ್ವೋತ್ತರ ಹಾಗೂ 'ಮೊಗಸಾಲೆ ಕಾದಂಬರಿ ಸಂಪುಟ 1'ನ್ನು ಕಾಂತಾವರದ ಕನ್ನಡಭವನದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಸೂಕ್ಷ್ಮ ಅರಿತು ಸಾಹಿತ್ಯ ರಚಿಸಿ: ಯಾವುದನ್ನು ಲೇಖನದಲ್ಲಿ ಹೇಳಬೇಕೋ ಅದನ್ನು ಲೇಖನದಲ್ಲಿಯೇ ಹೇಳಬೇಕು. ಲೇಖನದಲ್ಲಿ ಹೇಳಲಾಗದ್ದನ್ನು ಕವಿಯಾದವ ಕವಿತೆಯಲ್ಲಿ ಹೇಳಬಹುದು. ಇಂತಹ ಸೂಕ್ಷ್ಮ ಅರಿತು ರಚಿಸುವ ಸಾಹಿತ್ಯ ಜನಮನ ತಲುಪುತ್ತದೆ ಎಂದು ಅವರು ವಿಶ್ಲೇಷಿಸಿದರು. ನಿರ್ಮಲಾ ತಿರುಮಲೇಶ್ ಪ್ರಾರ್ಥಿಸಿದರು. ಅಲ್ಲಮ ಪ್ರಭು ಪೀಠದ ಕಾರ್ಯಾಧ್ಯಕ್ಷ ಯಶೋಧರ್ ಪಿ. ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ಸಿ.ಕೆ. ಪಡಿವಾಳ್ ಇದ್ದರು. ಡಾ.ನಾ.ಮೊಗಸಾಲೆ ಸ್ವಾಗತಿಸಿದರು. ಸದಾನಂದ ನಾರಾವಿ ನಿರ್ವಹಿಸಿದರು.