ಗೋಕರ್ಣ ದೇವಸ್ಥಾನ ಅರ್ಚಕರಿಗೆ ವಸ್ತ್ರ ಸಂಹಿತೆ
ಗೋಕರ್ಣ: ಇಲ್ಲಿನ ಮಹಾಬಲೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಅರ್ಚಕರಿಗೆ ವಸ್ತ್ರ ಸಂಹಿತೆ ಹಾಗೂ ಗುರುತಿನ ಚೀಟಿಯನ್ನು ಕಡ್ಡಾಯಗೊಳಿಸಲಾಗಿದೆ. ಆತ್ಮಲಿಂಗ ಭಕ್ತ ವೃಂದ ಈ ತೀರ್ಮಾನ ಕೈಗೊಂಡಿದ್ದು, ದೇವಾಲಯದ ಆಡಳಿತ ಮಂಡಳಿಯೂ ಇದಕ್ಕೆ ಸಹಕಾರ ನೀಡಿದೆ.
ದೇವಾಲಯ ಹಾಗೂ ಶ್ರೀ ಮಠದ ಚಾರಿತ್ರ್ಯ ಕೆಡಿಸುವ ಹುನ್ನಾರ ಖಂಡಿಸಿ ಭಕ್ತ ಸಮಾವೇಶ ನಡೆದು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಕಂಕಣಬದ್ಧರಾಗಲು ಆತ್ಮಲಿಂಗ ಭಕ್ತ ವೃಂದ ಹಾಗೂ ಆಡಳಿತ ಮಂಡಳಿ ತೀರ್ಮಾನಿಸಿತ್ತು. ಇದರ ಪರಿಣಾಮವಾಗಿ ಮಹಾಬಲೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಲಿರುವ ಅರ್ಚಕರಿಗೆ ವಸ್ತ್ರ ಸಂಹಿತೆಯನ್ನು ಹಾಗೂ ಗುರುತಿನ ಚೀಟಿಯನ್ನು ಕಡ್ಡಾಯಗೊಳಿಸಲಾಗಿದೆ. ಈ ಸಂಬಂಧ ನಿಯಮ ಉಲ್ಲಂಘಿಸಿದ ಹಾಗೂ ನೋಂದಣಿ ಹೊಂದದ ಅರ್ಚಕರಿಗೆ ಪೂಜಾ ವಿಧಿಯನ್ನೂ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಭಕ್ತರಿಗೆ ಅನುಕೂಲ: ಈ ನಿಟ್ಟಿನಲ್ಲಿ ವಿಶೇಷವಾಗಿ ಭಕ್ತಾದಿಗಳ ಪರವಾಗಿ ಪ್ರತಿಕ್ರಿಯಿಸಿದ ದೇವಾಲಯದ ಆಡಳಿತ ಕಾರ್ಯದರ್ಶಿ ಜಿ.ಕೆ. ಹೆಗಡೆ, ದೇವಾಲಯದಲ್ಲಿ ಶಿಸ್ತು, ಸಂಯಮ ಮತ್ತು ಭಕ್ತಾಧಿಗಳು ಅನಧಿಕೃತ ಅರ್ಚಕರಿಂದ ಸುಲಿಗೆಗೆ ಒಳಗಾಗಬಾರದು. ಸುಲಭವಾಗಿ ದೇವಾಲಯದ ಅಧಿಕೃತ ಉಪಾದಿವಂತ ಅರ್ಚಕರನ್ನು ಗುರುತಿಸುವ ಮೂಲಕ ನ್ಯಾಯ ಸಿಗುವಂತಾಗಲು ಈ ರೀತಿಯಲ್ಲಿ ಬದಲಾವಣೆ ತರಲಾಗಿದೆ. ಈ ನಿಟ್ಟಿನಲ್ಲಿ ಆಡಳಿತ ಮಂಡಳಿಯೂ ಸಹಕಾರ ನೀಡಿದೆ. ಈ ಹಿಂದೆ ನೋಂದಣಿಗೊಂಡ ಪಾರಂಪರಿಕ ಉಪಾಧಿವಂತರೂ ಈ ಬದಲಾವಣೆಗೆ ಒಪ್ಪಿಗೆ ಸೂಚಿಸಿದ್ದು, ಸಾರ್ವಜನಿಕರು ಸಹಕರಿಸುವಂತೆ ತಿಳಿಸಿದ್ದಾರೆ.