ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕಾರವಾರದಲ್ಲಿ ಮದ್ಯಕ್ಕೆ ಬರ!

ಚುನಾವಣೆಯಲ್ಲಿ ಯಾರೇ ಗೆಲ್ಲಲಿ, ಯಾರೇ ಸೋಲಲಿ, ಆಮೇಲೆ ನೋಡೋಣ. ಈಗೊಂದು ಪೆಗ್ ವಿಸ್ಕಿ, ರಮ್ ಸಿಕ್ಕರೆ ಸಾಕಿತ್ತು...

Srinivasa Murthy VN
Updated On : 20 Apr 2014, 12:27 pm

-ವಸಂತಕುಮಾರ್ ಕತಗಾಲ
ಕಾರವಾರ:
ಚುನಾವಣೆಯಲ್ಲಿ ಯಾರೇ ಗೆಲ್ಲಲಿ, ಯಾರೇ ಸೋಲಲಿ, ಆಮೇಲೆ ನೋಡೋಣ. ಈಗೊಂದು ಪೆಗ್ ವಿಸ್ಕಿ, ರಮ್ ಸಿಕ್ಕರೆ ಸಾಕಿತ್ತು... ಇದು ಕಾರವಾರದಲ್ಲಿ ತಮಗೆ ಬೇಕಾದ ಮದ್ಯದ ಬ್ರ್ಯಾಂಡ್‌ಗಾಗಿ ಅಲೆಯುತ್ತಿರುವವರ ಸಂಕಟ.
ಹೌದು. ಗೋವಾ ಹಾಗೂ ಕರ್ನಾಟಕಗಳಲ್ಲಿ ಕೆಲವೇ ದಿನಗಳ ಅಂತರದಲ್ಲಿ ಚುನಾವಣೆ ನಡೆದಿರುವುದರಿಂದ ಕಾರವಾರದಲ್ಲಿ ಮದ್ಯಕ್ಕೆ ಭಾರಿ ಬರ ಎದುರಾಗಿದೆ.
ಯಾವುದೇ ಬ್ರ್ಯಾಂಡ್‌ನ ಮದ್ಯವೂ ಈಗ ಕಾರವಾರದಲ್ಲಿ ಲಭ್ಯವಿಲ್ಲ. ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್ ಮಳಿಗೆಯಲ್ಲೂ ನೋ ಸ್ಟಾಕ್. ಅದರಲ್ಲೂ ಮಧ್ಯಮ ವರ್ಗದವರು  ಸೇವಿಸುವ ಮದ್ಯಗಳು ಇಲ್ಲವೇ ಇಲ್ಲ. ಅಂದರೆ ರು. 50ಗಳಿಂದ 100 ಒಳಗಿನ ಯಾವುದೆ ಮದ್ಯ ಸಿಗುತ್ತಿಲ್ಲ.
ಕಾರವಾರಿಗರು ಪ್ರತಿದಿನ ಸಾಕಷ್ಟು ಸಂಖ್ಯೆಯಲ್ಲಿ ಗೋವಾದ ಪೋಳೆಂ, ಕಾಣಕೋಣ ಮತ್ತಿತರ ಕಡೆಗಳಿಗೆ ತೆರಳಿ ಗುಂಡು ಪಾರ್ಟಿ ನಡೆಸುತ್ತಾರೆ. ಕರ್ನಾಟಕಕ್ಕೆ ಹೋಲಿಸಿದರೆ ಗೋವಾದಲ್ಲಿ ಮದ್ಯದ ದರ ಭಾರಿ ಪ್ರಮಾಣದಲ್ಲಿ ಕಡಿಮೆ ಇರುವುದೆ ಇದಕ್ಕೆ ಕಾರಣ. ಇದಲ್ಲದೆ ಗೋವಾದ್ದೆ ಆದ ಕೆಲವು ಬ್ರ್ಯಾಂಡ್‌ಗಳು ಮತ್ತೆಲ್ಲೂ ಸಿಗದು. ಆದರೆ ಗೋವಾದಲ್ಲಿ ಏ.12ರಂದು ಲೋಕಸಭೆ ಚುನಾವಣೆ ಇದ್ದದ್ದರಿಂದ  ಏ.11ರಿಂದ ಏ.12ರ ಮಧ್ಯರಾತ್ರಿ ತನಕ ಬಾರ್‌ಗಳನ್ನು ಬಂದ್ ಮಾಡಲಾಗಿತ್ತು. ಹೀಗಾಗಿ ಕಾರವಾರಿಗರು ಗೋವಾಕ್ಕೆ ಹೋಗಲಾಗದೆ ಕಾರವಾರದ ವೈನ್‌ಶಾಪ್ ಹಾಗೂ ಬಾರ್‌ಗಳಲ್ಲೆ ಪೆಗ್ ಹಿಡಿದು ಕುಳಿತರು.
ಇಷ್ಟೇ ಅಲ್ಲದೆ, ಆ ಸಂದರ್ಭದಲ್ಲಿ ಗೋವಾದ ಮದ್ಯಪ್ರಿಯರು ಲಗ್ಗೆ ಇಟ್ಟಿದ್ದು ಕಾರವಾರಕ್ಕೆ. ಗೋವಾದ ಚುನಾವಣೆಯ ಬಗ್ಗೆ ಗೊತ್ತಿಲ್ಲದೆ ಗೋವಾಕ್ಕೆ ತೆರಳಿದ್ದ ಬೇರೆ ಬೇರೆ ರಾಜ್ಯಗಳ ಪ್ರವಾಸಿಗರೂ ಕಾರವಾರದಲ್ಲಿ ಬಾರ್, ವೈನ್‌ಶಾಪ್‌ಗಳನ್ನು ಹುಡುಕಾಡಿ ನಿಶೆ ಏರಿಸಿಕೊಂಡರು.
ಕರಗಿದ ಸ್ಟಾಕ್: ಇದರ ಜತೆಯಲ್ಲಿ ಕಾರವಾರದಲ್ಲಿ ಏ.17ರ ಚುನಾವಣೆ ಪ್ರಚಾರ ಕಾರ್ಯದಲ್ಲಿ ನಿರತರಾದ ಹಲವರಿಗೆ ಮದ್ಯದ ಸರಬರಾಜು ಮಾಡಬೇಕಾದ ಅನಿವಾರ್ಯತೆಯಿಂದಾಗಿ ಹಠಾತ್ತಾಗಿ ಬೇಡಿಕೆ ಹೆಚ್ಚಿತು. ಕಾರವಾರದ ಬಾರ್‌ಗಳು, ವೈನ್‌ಶಾಪ್‌ಗಳಲ್ಲಿ ಇದ್ದ ಸ್ಟಾಕ್‌ಗಳೆಲ್ಲ ಕರಗಿದವು.
ಇದರ ಜತೆಗೆ ಎಂಎಸ್‌ಐಎಲ್ ಮಳಿಗೆಯಲ್ಲೂ ಬೇಡಿಕೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಯಿತು. ಕಾರವಾರದ ಎಂಎಸ್‌ಐಎಲ್ ಮಳಿಗೆಯಲ್ಲಿ ಪ್ರತಿದಿನ ರು. 20-25 ಸಾವಿರ ವ್ಯಾಪಾರ ನಡೆಯುತ್ತಿದ್ದರೆ ಕಳೆದ ಏ.6ರಿಂದ ಪ್ರತಿದಿನ ವ್ಯಾಪಾರ ರು. 60ರಿಂದ 70 ಸಾವಿರಗಳಿಗೇರಿತು. ಚುನಾವಣೆ ಸಂದರ್ಭವಾದುದ್ದರಿಂದ ಒಬ್ಬ ಗ್ರಾಹಕನಿಗೆ ಎರಡು ಬಾಟಲಿಗಳನ್ನು ಮಾತ್ರ ನೀಡಬೇಕೆಂದು ತಾಕೀಕು ಮಾಡಿತ್ತು. ಆದರೂ ಗ್ರಾಹಕರ ಸಂಖ್ಯೆ ತೀರಾ ಹೆಚ್ಚಾದ್ದರಿಂದ ಸ್ಟಾಕ್ ಮುಗಿದುಹೋಯಿತು. ಈಗ ಮತ್ತೆ ಮದ್ಯ ಪೂರೈಕೆಯಾಗಿಲ್ಲ. ಸದ್ಯದಲ್ಲಿಯೇ ಪೂರೈಕೆಯಾಗುವ ಬಗ್ಗೆ ಮದ್ಯ ಮಾರಾಟ ಮಳಿಗೆಯವರು ವಿಶ್ವಾಸ ವ್ಯಕ್ತಪಡಿಸಿದರು. ಈಗ ಜನತೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಿಶೆ ಇಳಿದಿದೆ. ಮದ್ಯದ ನಿಶೆಗಾಗಿ ನಿಶಾಚರರಾಗಿ ಅಲೆದಾಡುತ್ತಿದ್ದಾರೆ. ಕೆಲವೆಡೆ ಮದ್ಯದ ಬರವನ್ನೇ ಬಂಡವಾಳವನ್ನಾಗಿಟ್ಟುಕೊಂಡು ದರದಲ್ಲೂ ಭಾರಿ ಏರಿಕೆ ಮಾಡಲಾಗಿದೆ. ಯಾವಾಗ ಈ ಪರಿಸ್ಥಿತಿ ಸುಧಾರಣೆಯಾದೀತು ಎಂಬ ನಿರೀಕ್ಷೆಯಲ್ಲಿ ಪಾನಪ್ರಿಯರಿದ್ದಾರೆ.

ಕಳ್ಳಸಾಗಣೆಗೆ ತಡೆ
ಗೋವಾದಿಂದ ಕಾರವಾರಕ್ಕೆ ಮದ್ಯ ಸಾಗಣೆಯಾಗುವುದು ಸುಳ್ಳೇನಲ್ಲ. ಆದರೆ ಉಭಯ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಮಾಜಾಳಿ ಬಳಿ ಗೋವಾ ಹಾಗೂ ಕರ್ನಾಟಕದ ಗಡಿಯ ಚೆಕ್‌ಪೋಸ್ಟ್‌ನಲ್ಲಿ ಬಿಗಿ ಭದ್ರತೆ ಏರ್ಪಡಿಸಿದ್ದರಿಂದ ಹಾಗೂ ಸಮುದ್ರದಲ್ಲೂ ಪೆಟ್ರೋಲಿಂಗ್ ನಡೆಸಿದ್ದರಿಂದ ಸಾರಾಯಿ ಕಳ್ಳಸಾಗಣೆ ಸ್ಥಗಿತಗೊಂಡಿತು. ಇದೂ ಕೂಡ ಕಾರವಾರದಲ್ಲಿ ಮದ್ಯದ ಬರಕ್ಕೆ ಒಂದು ಕಾರಣವಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement