ಉಳ್ಳಾಲದಲ್ಲಿ ಅಘೋಷಿತ ಕರ್ಫ್ಯೂ
ಮಂಗಳೂರು: ಉಳ್ಳಾಲದಲ್ಲಿ ಶುಕ್ರವಾರ ಅಘೋಷಿತ ಕರ್ಫ್ಯೂ ವಾತಾವರಣ. ರಾಜ್ಯದ ಇತರೆಡೆಯಿಂದ ಪೊಲೀಸ್ ತುಕಡಿಗಳನ್ನು, ಅಧಿಕಾರಿಗಳನ್ನು ಮಂಗಳೂರಿಗೆ ಕರೆಸಿದ್ದು, ಯಾರಿಗೂ ಮನೆಯಿಂದ ಹೊರಗೆ ಬರದಂತೆ ತಾಕೀತು ಮಾಡಿದ್ದಾರೆ. ಗಲಭೆಯಲ್ಲಿ ಪಾಲ್ಗೊಂಡವರನ್ನು ಮತ್ತು ಮುಂಜಾಗ್ರತೆ ಕ್ರಮವಾಗಿ ನೂರಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಗಲಭೆ ಉಳ್ಳಾಲದಿಂದ ಹೊರಗೆ ಹಬ್ಬದಂತೆ ಎಲ್ಲೆಡೆ ನಾಕಾಬಂಧಿ ಮಾಡಲಾಗಿದೆ. ಶುಕ್ರವಾರ ದುಷ್ಕರ್ಮಿಗಳು ಬಸ್‌ಗೆ ಕಲ್ಲು ತೂರಿದ ಪರಿಣಾಮ ಮಗು ಗಾಯಗೊಂಡಿದೆ. ಗುರುವಾರ ರಾತ್ರಿ ಶಾಂತಿ ಸಭೆ ಬಳಿಕ ಕೋಟೆಪುರದಲ್ಲಿ ಬೋಟ್‌ಗಳಿಗೆ ಬೆಂಕಿ ಹಚ್ಚಲಾಗಿದೆ ಎಂಬ ವದಂತಿಯಿಂದ ಸಿಟ್ಟಿಗೆದ್ದ ಮೀನುಗಾರರು ಕೋಟೆಪುರದತ್ತ ಧಾವಿಸಿದ್ದು, ಎರಡು ಕಡೆಯಿಂದ ಕಲ್ಲು ತೂರಾಟ ನಡೆಯಿತು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಿದರು. ಗಲಭೆ ತೀವ್ರ ರೂಪಕ್ಕೆ ತಿರುಗುವ ಸಾಧ್ಯತೆಯಿಂದ ಪೊಲೀಸರು ಎರಡು ಸಮುದಾಯದ ಮನೆಗಳಿಗೆ ನುಗ್ಗಿ ಗಂಡಸರನ್ನು ಬಂಧಿಸಿದ್ದಾರೆ. ಪೊಲೀಸ್ ಕಮಿಷನರ್‌ಗೆ ನ್ಯಾಯಿಕ ಅಧಿಕಾರ ನೀಡಲಾಗಿದೆ. ಉಳ್ಳಾಲಕ್ಕೆ ಬಂದು ಸ್ಥಳೀಯರ ಜತೆ ಮಾತನಾಡುವುದು. ಇನ್ನು ಮುಂದೆ ಸಭೆ ನಡೆಸಲು ಬಿಡುವುದಿಲ್ಲ. ಇದು ಗಲಭೆ ಹಬ್ಬಲು ಕಾರಣವಾಗಬಹುದು ಎಂದು ಪೊಲೀಸರು ಜನಪ್ರತಿನಿಧಿಗಳಿಗೆ ಸ್ಪಷ್ಟ ಸಂದೇಶ ಕಳುಹಿಸಿದ್ದಾರೆ.
ಪೆಟ್ರೋಲ್ ಬಾಂಬ್, ತಳವಾರ್ ವಶ: ಉಳ್ಳಾಲ ಪರಿಸರದ ಮನೆಗಳಲ್ಲಿ ದುಷ್ಕರ್ಮಿಗಳು ಬಳಸಲು ಇಟ್ಟಿದ್ದ ಪೆಟ್ರೋಲ್ ಬಾಂಬ್, ತಳವಾರ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ 75 ಮಂದಿ ಬಂಧಿಸಲಾಗಿದೆ ಬಂಧಿತರನ್ನು ಕೋರ್ಟ್‌ಗೆ ಹಾಜರು ಪಡಿಸಲಾಗಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಆರ್.ಹಿತೇಂದ್ರ ತಿಳಿಸಿದ್ದಾರೆ.