ಇನಾಂ ಭೂಮಿಗಾಗಿ ಪ್ರತಿಭಟನೆ, ಹೊಡೆದಾಟ
ಮೂಡಿಗೆರೆ: ಇನಾಂ ಭೂಮಿ ಒತ್ತುವರಿ ತೆರವುಗೊಳಿಸಬಾರದೆಂದು ಬಲಿಗೆ ಗ್ರಾಮದಲ್ಲಿ ಸೋಮವಾರ ನಡೆದ ಪ್ರತಿಭಟನೆ ವೇಳೆ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಕೈಕೈ ಮಿಲಾಯಿಸಿದ ಘಟನೆ ನಡೆಯಿತು.
ಸೋಮವಾರ ಇನಾಂ ಭೂಮಿಯನ್ನು ಅರಣ್ಯ ಇಲಾಖೆಯವರು ತೆರವುಗೊಳಿಸುವುದನ್ನು ವಿರೋಧಿಸಿ ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಬೆಳಗ್ಗೆಯೇ ಬಲಿಗೆ ಗ್ರಾಮದಲ್ಲಿ ರಸ್ತೆ ತಡೆ ಹಾಗೂ ಧರಣಿ ನಡೆಸಿದರು.
ಈ ಸಂದರ್ಭ ಮಧ್ಯ ಪ್ರವೇಶಿಸಿದ ಕಾಂಗ್ರೆಸ್ ಕಾರ್ಯಕರ್ತರು ಇನಾಂ ಭೂಮಿ ಒತ್ತುವರಿಗೆ ಜೆಡಿಎಸ್ ಕಾರಣ. ಪ್ರತಿಭಟನೆ ಮಾಡಲು ಜೆಡಿಎಸ್ಗೆ ಯಾವುದೇ ಅರ್ಹತೆ ಇಲ್ಲ. ಚುನಾವಣೆ ಹತ್ತಿರವಾಗುತ್ತಿರುವುದರಿಂದ ರಾಜಕೀಯ ಲಾಭ ಪಡೆಯಲು ನಾಟಕವಾಡುತ್ತಿದ್ದಾರೆ. ಇನಾಂ ಭೂಮಿ ತೆರವುಗೊಳ್ಳುವುದರ ಮೂಲಕ ಜನರನ್ನು ಬೀದಿಗೆ ತಳ್ಳಲು ಅಂದಿನ ಜೆಡಿಎಸ್ ಸರ್ಕಾರವೇ ಕಾರಣ ಎಂದು ಕೂಗಾಡಿದ್ದಾರೆ. ಇದು ಜೆಡಿಎಸ್ ಕಾರ್ಯಕರ್ತರನ್ನು ಕೆರಳಿಸಿದೆ. ಮಾತಿನ ಚಕಮಕಿ ನಡೆದು ಕೈ ಕೈ ಮೀಲಾಯಿಸಿದ್ದಾರೆ.
ಆಗ ಮಧ್ಯಪ್ರವೇಶಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಶಾಸಕ ಸಿ.ಟಿ. ರವಿ ಹಾಗೂ ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ ಕಾಂಗ್ರೆಸ್ ಕಾರ್ಯಕರ್ತರನ್ನು ಸಮಾಧಾನ ಮಾಡಿದರು. ಇದು ಪ್ರತಿಯೊಬ್ಬರ ಜೀವನದ ಹಕ್ಕಿನ ಹೋರಾಟವಾಗಿದೆ. ಇದರಲ್ಲಿ ರಾಜಕೀಯ ಬೇಡ. ಯಾವುದೋ ಒಂದು ಸಂದರ್ಭದಲ್ಲಿ ತಪ್ಪುಗಳಾಗಿದೆ. ಅದನ್ನು ಸರಿಪಡಿಸಲು ಮುಂದುವರಿಯಬೇಕೇ ಹೊರತು ಕೆದಕಬಾರದು ಎಂದು ಹೇಳಿ, ಅವರನ್ನೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದರು.
ವಿಷದ ಬಾಟಲಿ ವಶಕ್ಕೆ: ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸ್ಥಳೀಯರಲ್ಲಿ ಕೆಲವರು ವಿಷದ ಬಾಟಲಿಯನ್ನು ಜೇಬಿನಲ್ಲಿಟ್ಟುಕೊಂಡು ಬಂದಿದ್ದರು. ವಿಷಯ ತಿಳಿದ ಪೊಲೀಸರು ಅವುಗಳನ್ನು ವಶಕ್ಕೆ ತೆಗೆದುಕೊಂಡರು.