ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಗಲಭೆ ಸಂತ್ರಸ್ತರಿಗೆ ಹಿಂದೂ ನಿಧಿ ಸ್ಥಾಪನೆ

Srinivasa Murthy VN
Updated On : 12 Feb 2014, 1:14 am

-ಜಿತೇಂದ್ರ ಕುಂದೇಶ್ವರ
ಮಂಗಳೂರು: ಅಮಾಯಕ ಹಿಂದೂಗಳ ಮೇಲೆ, ಅವರ ಮನೆಗಳ ಮೇಲೆ ದಾಳಿಯಾದಾಗ ಪರಿಹಾರ ನೀಡಲು 'ಹಿಂದೂ ನಿಧಿ' ಸ್ಥಾಪನೆಗೆ ಪೇಜಾವರ ಶ್ರೀಗಳ ನೇತೃತ್ವದಲ್ಲಿ 15ಕ್ಕೂ ಹೆಚ್ಚು ಮಠಾಧಿಪತಿಗಳು, ಹಿಂದೂ ಧಾರ್ಮಿಕ ಮುಖಂಡರು ನಿರ್ಣಯ ಕೈಗೊಂಡಿದ್ದಾರೆ.
ಸಂಘನಿಕೇತನದಲ್ಲಿ ಪತ್ರಕರ್ತರನ್ನು ಹೊರಗಿಟ್ಟು ನಡೆಸಿದ ಗುಪ್ತ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಆಯಕಟ್ಟಿನ ಜಾಗದಲ್ಲಿ ಅಲ್ಪಸಂಖ್ಯಾತರೇ ಹೆಚ್ಚಿದ್ದಾರೆ. ಬಹುಸಂಖ್ಯಾತರಿದ್ದರೂ ಸರ್ಕಾರದ ಮರ್ಜಿಯಲ್ಲಿಯೇ ನಡೆಯುತ್ತಿದ್ದಾರೆ. ನಮ್ಮ ಮಾತು ಕೇಳುವವರೇ ಇಲ್ಲ. ಈ ಸಂದರ್ಭದಲ್ಲಿ ಪೀಠಾಧಿಪತಿಗಳು, ರಾಜ್ಯಪಾಲರ ಗಮನಕ್ಕೆ ಈ ವಿಚಾರ ತರುವ ಕುರಿತು ನಿರ್ಧಾರ ಕೈಗೊಳ್ಳಲಾಯಿತು.
ಯಾವುದೇ ತಪ್ಪು ಮಾಡದೆ ಹಿಂದೂ ಎಂಬ ಕಾರಣಕ್ಕೆ ಗಲಭೆಯಲ್ಲಿ ಅಮಾಯಕರು ಪೆಟ್ಟು ತಿಂದರೆ ಆತನ ಸಂಕಷ್ಟ ಯಾರೂ ಕೇಳುವವರಿಲ್ಲ. ಅವರ ಆಸ್ಪತ್ರೆ ಖರ್ಚು ನೋಡುವವರಿಲ್ಲ, ಈಗಂತೂ ಸರ್ಕಾರ ಗಮನ ನೀಡುವುದೇ ಇಲ್ಲ. ಮನೆಗಳ ಮೇಲೆ ದಾಳಿ ಮಾಡಿದಾಗ ದುರಸ್ತಿಗೆ ಲಕ್ಷಾಂತರ ರುಪಾಯಿ ಖರ್ಚಾಗುತ್ತದೆ. ಇದನ್ನು ಭರಿಸಲು ಕಷ್ಟವಾಗುತ್ತದೆ. ಕ್ರಮೇಣ ದಾಳಿ ಹೆಚ್ಚಾದರೆ ಆ ಪ್ರದೇಶದಿಂದ ಬಿಟ್ಟು ಹೋಗುವ ಸಾಧ್ಯತೆಯೂ ಇದೆ. ಹೀಗಾದರೆ ಕಡಲ ತೀರದಲ್ಲಿ ಮುಂದಕ್ಕೆ ಭಯೋತ್ಪಾದನೆ ಚಟುವಟಿಕೆ, ಐಎಸ್‌ಐ ಚಟುವಟಿಕೆ, ಸ್ಮಗ್ಲಿಂಗ್ ಹೆಚ್ಚಾಗುವ ಸಾಧ್ಯತೆ ಇದೆ. ಇದು ಸಮಾಜಕ್ಕೆ ಬೆದರಿಕೆ. ಆದ್ದರಿಂದ ಇಂಥ ಬಡ ಹಿಂದೂ ಸಮುದಾಯದ ರಕ್ಷಣೆಗೆ ಮಠಾಧಿಪತಿಗಳು ಒಟ್ಟಾಗಿ ದೇಣಿಗೆ ಸಂಗ್ರಹಿಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
'ನಾವು ಅಲ್ಪಸಂಖ್ಯಾತರಾಗುತ್ತಿದ್ದೇವೆ, ಬಡವರಿಗೆ ಶಿಕ್ಷಣ ಬೇಕು, ನಾವು ಶಿಕ್ಷಣ ಸಂಸ್ಥೆ ಸ್ಥಾಪಿಸಬೇಕು' ಎಂದು ಆದಿಚುಂಚನಗಿರಿ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು. ಬಡವರ ನೆರವಿಗೆ ತಕ್ಷಣ 1 ಲಕ್ಷ ನೀಡುತ್ತೇನೆ, ಅಗತ್ಯ ಬಿದ್ದರೆ ಸಂಗ್ರಹಿಸಿ ನೀಡುತ್ತೇನೆ ಎಂದು ಭರವಸೆ ನೀಡಿದರು. ಈಗ ಒಂದು ಘಟನೆಗೆ, ದಿನಕ್ಕೆ ನಿಧಿ ಮೀಸಲಾಗಬಾರದು, ಬಡ ಹಿಂದೂಗಳ ರಕ್ಷಣೆಗೆ ಶಾಶ್ವತ ನಿಧಿ ಮಾಡಬೇಕು, ತುರ್ತಾಗಿ ಈಗ 5 ಕೋಟಿ ಸಂಗ್ರಹಿಸಬೇಕು ಎಂಬ ಅಭಿಪ್ರಾಯ ಕೇಳಿ ಬಂತು. ಸಭೆಯಲ್ಲಿ ಹತ್ತು ಲಕ್ಷ ದೇಣಿಗೆ ನೀಡುವ ಘೋಷಣೆ ಆಯಿತು.
ದೌರ್ಜನ್ಯ ನಡೆದಾಗ ನಾವೆಲ್ಲ ನಿಮ್ಮ ಜತೆಗೆ ಇದ್ದೇವೆ ಎಂಬ ಭರವಸೆ ನೀಡಬೇಕು, ಮುಂದೆ ಘಟನೆ ನಡೆದರೆ ಏಕಕಾಲದಲ್ಲಿ ಎಲ್ಲೆಡೆಯಿಂದ ಬೆಂಬಲ ನೀಡುವ ಬಗ್ಗೆಯೂ ಚರ್ಚೆ ಆಯಿತು. ಒಕ್ಕೊರಲಿಂದ ಎಲ್ಲ ಸ್ವಾಮೀಜಿಗಳು ನಿಧಿ ಸ್ಥಾಪನೆಗೆ ಸಮ್ಮತಿ ನೀಡಿದರು. ವೈಯಕ್ತಿಕ ದ್ವೇಷಕ್ಕೆ ಸಂಬಂಧಿಸಿದ ಗಲಾಟೆಗೆ ಈ ನಿಧಿ ಬಳಕೆ ಆಗಲೇಬಾರದು. ಈ ಹಣವನ್ನು ಪರಿಹಾರ ಮತ್ತು ರಕ್ಷಣೆಗೆ ಮಾತ್ರ ಬಳಸಬೇಕು ಎಂದು ಕಟ್ಟಪ್ಪಣೆ ವಿಧಿಸಲಾಯಿತು. ಸಭೆಯಲ್ಲಿ ದೇವಸ್ಥಾನ ಪ್ರಮುಖರು, ಮೀನುಗಾರ ಮುಖಂಡರು, ಪರಿಶಿಷ್ಟ ಜಾತಿ, ಪಂಗಡ ಸಹಿತ ಸಮುದಾಯದ ಪ್ರಮುಖರು ಇದ್ದರು.  
ಖಾದರ್‌ಗೆ ಆಕ್ಷೇಪ: ಎಲ್ಲ ಸ್ವಾಮೀಜಿಗಳು, ಆರೋಗ್ಯ ಸಚಿವ ಯು.ಟಿ.ಖಾದರ್ ಜನಪ್ರಿಯ ವ್ಯಕ್ತಿ ಎಂದು ಅಟ್ಟಕ್ಕೇರಿಸುತ್ತಾರೆ. ನಿಮಗೆಲ್ಲ ಖಾದರ್ ಇಲ್ಲದೆ ಆಗುವುದಿಲ್ಲ, ಶ್ಲೋಕ ಹೇಳಿದ ತಕ್ಷಣ ಧರ್ಮದ ಬಗ್ಗೆ ಪ್ರೀತಿ ಇದ್ದವರು ಎಂದು ಹೊಗಳುತ್ತೀರಿ. ಆದರೆ ಘಟನೆ ಹಿಂದೆ ಖಾದರ್ ಕೈವಾಡ ಇದೆ ಎಂದು ಧಾರ್ಮಿಕ ಮುಖಂಡರು ಆರೋಪ ವ್ಯಕ್ತಪಡಿಸಿದರು. ಆದರೆ ಈ ಬಗ್ಗೆ ಚರ್ಚೆಗೆ ಸ್ವಾಮೀಜಿಗಳು ಆಸಕ್ತಿ ವಹಿಸಲಿಲ್ಲ.
'ಹಿಂದೂ ಮಹಿಳೆಯರು ತಮ್ಮ ರಕ್ಷಣೆಗೆ ಜೋಳಿಗೆಯಲ್ಲಿ ಖಾರದ ಹುಡಿ, ಆ್ಯಸಿಡ್ ಇಟ್ಟುಕೊಳ್ಳಿ' ಎಂದು ಕೊಲ್ಯ ರಮಾನಂದ ಸ್ವಾಮೀಜಿ ಹೇಳಿದರು. ವಜ್ರದೇಹಿ ಮಠಾಧೀಶರು ಕೂಡಾ ಖಡಕ್ಕಾಗಿ ಮಾತನಾಡಿದರು. ಈಗಲೇ ಉಳ್ಳಾಲಕ್ಕೆ ಹೋಗೋಣ, ಇಷ್ಟು ಮಂದಿ ಸ್ವಾಮೀಜಿಗಳು ಸೇರಿದ್ದೇ ಇತಿಹಾಸ. ನಾವು ಎಲ್ಲ ಊರುಗಳಲ್ಲಿ ಆಯಾ ಪ್ರದೇಶದಲ್ಲಿ ಉಸ್ತುವಾರಿ ವಹಿಸಿ ಸಮುದಾಯದವರಿಗೆ ಮಾರ್ಗದರ್ಶನ ನೀಡೋಣ ಎಂದರು.
ಸಾರಥಿಗೆ ಆಕ್ಷೇಪ!: ತಮ್ಮ ವಾಹನಗಳಲ್ಲಿ ಅನ್ಯಧರ್ಮದ ಸಾರಥಿಗಳನ್ನು ಇಟ್ಟುಕೊಳ್ಳಬೇಡಿ ಎದು ಕಲ್ಲಡ್ಕ ಪ್ರಭಾಕರ ಭಟ್ ಆರಂಭದಲ್ಲಿ ಕಿವಿ ಮಾತು ಹೇಳಿದ್ದರು. ತೊಕ್ಕೊಟ್ಟು ಮಠದ ಸ್ವಾಮೀಜಿ ಒಬ್ಬರು ಅಲ್ಪಸಂಖ್ಯಾತ ಚಾಲಕರ ಜತೆ ಬಂದಿದ್ದರು. ಅವರು ಸೌಹಾರ್ದ ಬಗ್ಗೆ ಭಾಷಣ ಮಾಡತೊಡಗಿದಾಗ ಸಭೆಯಲ್ಲಿ ಆಕ್ಷೇಪ ಕೇಳಿಬಂತು. ಮೂಡುಬಿದರೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸೌಹಾರ್ದ ಕುರಿತು ಮಾತನಾಡಿ, ಸುದ್ದಿಗೋಷ್ಠಿವರೆಗೆ ನಿಲ್ಲದೆ ಮಧ್ಯೆಯೇ ಹೊರಟು ಹೋದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement