ಹಿಂದುಗಳ ಮೇಲಿನ ದೌರ್ಜನ್ಯ ಹೆಚ್ಚಳಕ್ಕೆ ಸರ್ಕಾರ ಕಾರಣ
ಮಂಗಳೂರು: ಉಳ್ಳಾಲ ಸಹಿತ ಕರಾವಳಿಯಲ್ಲಿ ಹಿಂದು ಸಮುದಾಯದ ಮೇಲೆ ದೌರ್ಜನ್ಯಕ್ಕೆ ಸರ್ಕಾರದ ಆಡಳಿತ ವೈಫಲ್ಯವೇ ಕಾರಣ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಹಿಂದೂ ದೌರ್ಜನ್ಯ ಕುರಿತು ಸಂಘನಿಕೇತನದಲ್ಲಿ 15 ಮಠಾಧಿಪತಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕೆಲವು ತಿಂಗಳಿಂದ ಹಿಂದೂ ಸಮುದಾಯದ ಮೇಲೆ ನಾನಾ ರೀತಿಯಲ್ಲಿ ದಾಳಿಗಳು ನಡೆಯುತ್ತಿವೆ. ಮನೆಗಳಿಗೆ, ವಾಹನಗಳಿಗೆ ಕಲ್ಲು ತೂರಲಾಗಿದೆ, ಬೋಟ್ಗಳಿಗೆ ಹಾನಿ ಮಾಡಲಾಗಿದೆ. ಪರಿಸ್ಥಿತಿ ಶಾಂತವಾದೀತು, ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳಬಹುದು ಎಂದು ಸಹನೆಯಿಂದ ಕಾಯುತ್ತಿದ್ದೆವು. ಆದರೆ ಉಳ್ಳಾಲದಲ್ಲಿ ಮೊಗವೀರ ಮೀನುಗಾರರ ಮೇಲೆ ಅಲ್ಪಸಂಖ್ಯಾತರು ದಾಳಿ ನಡೆಸಿದ್ದಾರೆ. ಮಂದಿರದಲ್ಲಿ ಮಲಗಿದ್ದ ಹಿರಿಯರನ್ನು, ಮಕ್ಕಳನ್ನು ಬಂಧಿಸಿ ಕರೆದೊಯ್ದಿದ್ದಾರೆ. ಅವರೆಲ್ಲರನ್ನು ಬಿಡುಗಡೆ ಮಾಡಬೇಕು ಎಂದರು.