ಗೋವುಗಳು ನಮ್ಮನ್ನು ಕಾಯಲಿ ಎನ್ನುವುದಕ್ಕಿಂತ ನಾವು ಅವುಗಳನ್ನು ಕಾಯೋಣ
ಬೆಳ್ತಂಗಡಿ: ಎಲ್ಲ ಮತ ಧರ್ಮದವರ ಬದುಕಿನಲ್ಲಿ ಗೋವು ವ್ಯಾಪಿಸಿದೆ. ಹೀಗಾಗಿ ಗೋ ಋಣಭಾರ ನಮ್ಮೆಲ್ಲರ ಮೇಲಿದೆ. ಗೋವುಗಳ ಪಾಲನೆಯಿಂದ ಮನುಕುಲ ಜೀವಕುಲ ಸುರಕ್ಷಿತವಾಗಿರುತ್ತದೆ. ಗೋವುಗಳು ನಮ್ಮನ್ನು ಕಾಯಲಿ ಎಂಬ ಅಪೇಕ್ಷೆ ನಮ್ಮೆಲರದ್ದಾಗಿದ್ದರೂ, ಅದಕ್ಕಿಂತ ಮೊದಲು ನಾವು ಅವುಗಳನ್ನು ಕಾಯೋಣ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಗುರುವಾರ ವೇಣೂರು ಸಮೀಪದ ಗುಂಡೂರಿಯಲ್ಲಿನ ಕಾವೇರಮ್ಮ ಅಮೃತಧಾರಾ ಗೋಶಾಲೆಯ ಆವರಣದಲ್ಲಿ ಆರಂಭಗೊಂಡ ಜನಜನನೀ ಎಂಬ ಗೋವಿನ ಉತ್ಸವ ಗೋ ಸಮ್ಮೇಳನದಲ್ಲಿ ಆಶೀರ್ವಚನ ನೀಡಿದರು.
ಇದಕ್ಕೂ ಮೊದಲು ಶ್ರೀಗಳು ಗೋಶಾಲೆಯ ಸಮೀಪದಲ್ಲೇ ಶ್ರೀ ಗೋಪಾಲಕೃಷ್ಣ ದೇವರ ಬಿಂಬ ಸ್ಥಾಪನೆ, ಕಲಶಾಭಿಷೇಕ ಪೂಜೆಯನ್ನು ನೆರವೇರಿಸಿದರು. ಬಳಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನರ ಅಪೇಕ್ಷೆ ಪೋರೈಸುವವಳು ಕಾಮಧೇನು. ಗೋವಿನ ವಿಚಾರದಲ್ಲಿ ಜಾತಿಮತದ ಭೇದವಿಲ್ಲ. ಗೋವಿನ ಋಣಭಾರ ಹೊತ್ತಿರುವ ನಮಗೆ ಗೋವಿನ ವಿಚಾರದಲ್ಲಿ ನಮಗೊಂದು ಕರ್ತವ್ಯವಿದೆ ಎಂಬ ಸತ್ಯ ಗೊತ್ತಿರಲಿ.
ಇಲ್ಲಿ ಗೋಪಾಲಕೃಷ್ಣನ ಮೂರ್ತಿ ನೆಲೆನಿಂತಿದೆ. ಹೀಗಾಗಿ ಗೋಶಾಲೆ ಇನ್ನು ಮುಂದೆ ಉನ್ನತಿಯಾಗುವುದರಲ್ಲಿ ಸಂಶಯವೇ ಇಲ್ಲ. ತನ್ನ ಆದಾಯದ ಬಹುಪಾಲನ್ನು ಗೋಶಾಲೆಗೆ ಮೀಸಲಿಟ್ಟಿರುವ ಕಾಂತಾಜೆ ಈಶ್ವರ ಭಟ್ಟರ ಸಾಹಸ ಸಾರ್ಥಕವಾಗಲಿದೆ ಎಂದರು.