ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪಾಲಿಕೆ ಅಭಿವೃದ್ಧಿಗೆ ಹಸಿರು ಇಂಧನ ತಾಂತ್ರಿಕತೆ

Srinivasa Murthy VN
Updated On : 5 Jun 2014, 12:53 pm

ದೇಶದ 5 ನಗರಗಳ ಪೈಕಿ ರಾಜ್ಯದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಆಯ್ಕೆ
-ಆತ್ಮಭೂಷಣ್
ಮಂಗಳೂರು: ಭಾರತ ಹಾಗೂ ಯುರೋಪಿಯನ್ ಮಹಾನಗರ ಪಾಲಿಕೆಗಳ ಸಹಭಾಗಿತ್ವದಲ್ಲಿ ಹಸಿರು ಇಂಧನ ಮೂಲದ ತಾಂತ್ರಿಕತೆ ಉಪಯೋಗಿಸಿ ನಗರಾಭಿವೃದ್ಧಿಪಡಿಸುವ ಯೊಜನೆಗೆ ಮಂಗಳೂರು ಮಹಾನಗರ ಪಾಲಿಕೆ ಆಯ್ಕೆಯಾಗಿದೆ. ದೇಶದ ಆಯ್ದ 5 ನಗರಗಳಲ್ಲಿ ಈ ಯೋಜನೆ ಜಾರಿಗೊಳ್ಳುತ್ತಿದ್ದು, ಕರ್ನಾಟಕದಲ್ಲಿ ಮಂಗಳೂರು ಪಾಲಿಕೆಗೆ ಅವಕಾಶ ಲಭಿಸಿದೆ.
 ಇದಕ್ಕಾಗಿ ದೇಶದ 5 ಮಹಾನಗರ ಪಾಲಿಕೆಗಳಿಗೆ ಯುರೋಪಿಯನ್ ಮಹಾನಗರ ಪಾಲಿಕೆಗಳು ನೀಡುವ ಒಟ್ಟು ಮೊತ್ತ ರು. 76.6 ಕೋಟಿ. ಆಯಾ ರಾಜ್ಯ ಸರ್ಕಾರಗಳು ತಲಾ ರು. 15.35 ಕೋಟಿ ಮಹಾನಗರ ಪಾಲಿಕೆಗಳಿಗೆ ಪಾವತಿಸಲಿದೆ. ಈ ಮೊತ್ತ ಅನುದಾನವಾದ್ದರಿಂದ ಮರು ಪಾವತಿಸುವ ತಾಪತ್ರಯ ಇಲ್ಲ. ಈ ಯೋಜನೆಯನ್ನು ನಾಲ್ಕು ವರ್ಷದಲ್ಲಿ ಪೂರ್ಣಗೊಳಿಸಬೇಕು. ಆದರೆ ಶೇ.25 ಮೊತ್ತ( 3.8 ಕೋಟಿ)ಮಹಾನಗರ ಪಾಲಿಕೆಗಳು ಭರಿಸಬೇಕು. ಬೆಂಗಳೂರಿನ ಸುಸ್ಥಿರ ಅಭಿವೃದ್ಧಿ ಕೇಂದ್ರ ಯೋಜನೆ ಜಾರಿಗೊಳಿಸುವ ಜವಾಬ್ದಾರಿ ವಹಿಸಿಕೊಂಡಿದೆ.
ಹಸಿರು ತಾಂತ್ರಿಕತೆ ಎಂದರೆ...: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ, ಘನತ್ಯಾಜ್ಯ ವಿಲೇವಾರಿ, ನಗರ ಹಸಿರೀಕರಣ, ಸೋಲಾರ್ ಇಂಧನ ಬಳಕೆಗೆ ಒತ್ತು ನೀಡುವುದು ಇದರ ಉದ್ದೇಶ. ಎಡಿಬಿಯಲ್ಲಿ ಸಮಗ್ರ ಒಳಚರಂಡಿ ಯೋಜನೆಗೆ ರು. 254 ಕೋಟಿ ವಿನಿಯೋಗಿಸಲಾಗುತ್ತಿದೆ. ಆದರೂ ಈ ಯೋಜನೆಯನ್ನು ಸೇರಿಸಿ ಒಳಚರಂಡಿ ವ್ಯವಸ್ಥೆಯನ್ನು ಪರಿಸರ ಪೂರಕವಾಗಿ ಸಮರ್ಪಕಗೊಳಿಸಲಿದೆ. ಘನತ್ಯಾಜ್ಯ ವಿಲೇವಾರಿಗೆ ಹಸಿರು ತಾಂತ್ರಿಕತೆ ಸ್ಪರ್ಶ ನೀಡುವುದು. ನಗರಕ್ಕೆ ಸೋಲಾರ್ ದೀಪ ಅಳವಡಿಕೆ, ನಗರದಾದ್ಯಂತ ಹಸುರೀಕರಣಕ್ಕೆ ವಿವಿಧ ಕಾರ್ಯಕ್ರಮ ಜಾರಿಗೊಳಿಸಲು ಪಾಲಿಕೆ ತೀರ್ಮಾನಿಸಿದೆ.
 'ಪಾಲಿಕೆ ಕೈಗೊಳ್ಳಬೇಕಾದ ಕಾರ್ಯಯೋಜನೆಯ ಪಟ್ಟಿ ಮಾಡಲಾಗುತ್ತಿದೆ. ಯೋಜನೆಯ ಸಮಗ್ರ ವರದಿಯನ್ನು ಯುರೋಪಿಯನ್ ಪಾಲಿಕೆಗೆ ಕಳುಹಿಸಲಿದ್ದು, ಅಲ್ಲಿಂದ ಅನುಮೋದನೆಗೊಂಡ ನಂತರ ಯೋಜನೆ ಕಾರ್ಯಗತಗೊಳಿಸಲಾಗುವುದು' ಎಂದು ಪರಿಸರ ಎಂಜಿನಿಯರ್ ಮಧು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.

'ಪಾಲಿಕೆ ಭರಿಸಬೇಕಾದ ಶೇ.25 ಮೊತ್ತ ಪಾವತಿಗೆ ಪೂರ್ವಭಾವಿ ಅನುಮೋದನೆ ನೀಡಲಾಗಿದೆ. ಪರಿಸರ ಸ್ನೇಹಿ ತಾಂತ್ರಿಕತೆಯ ಯೋಜನೆ ರೂಪಿಸಲು ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿ ಶೀಘ್ರವೇ ಕಾರ್ಯಯೋಜನೆಯನ್ನು ಅಂತಿಮಗೊಳಿಸಿದ ಬಳಿಕ ವಿವರವನ್ನು ಸುಸ್ಥಿರ ಅಭಿವೃದ್ಧಿ ಕೇಂದ್ರಕ್ಕೆ ಕಳುಹಿಸಲಾಗುವುದು. ಯುರೋಪಿಯನ್ ಮಹಾನಗರ ಪಾಲಿಕೆಯ ಒಪ್ಪಿಗೆ ಬಳಿಕ ಯೋಜನೆ ಜಾರಿಗೊಳಿಸುತ್ತೇವೆ'.
-ಮಹಾಬಲ ಮಾರ್ಲ, ಮೇಯರ್, ಮಹಾನಗರ ಪಾಲಿಕೆ ಮಂಗಳೂರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement