ವಶಕ್ಕೆ ತೆಗೆದುಕೊಂಡ ಹಡಗು ನಾಪತ್ತೆ
ಕಾರವಾರ: ವಾರದ ಹಿಂದೆ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದ ವಿದೇಶಿ ಹಡಗು ಭಾನುವಾರ ರಾತ್ರಿ ಹಠಾತ್ತಾಗಿ ನಾಪತ್ತೆಯಾಗಿದೆ. ವಶಕ್ಕೆ ತೆಗೆದುಕೊಂಡು ಬಿಡುಗಡೆ ಮಾಡಿದ ಕ್ರಮ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಹಡಗು ಎಲ್ಲಿಂದ ಬಂದಿತ್ತು? ಅದರಲ್ಲಿ ಇರುವ ವಸ್ತುವಾದರೂ ಏನು? ಯಾಕಾಗಿ ಹಡಗನ್ನು ವಶಕ್ಕೆ ತೆಗೆದುಕೊಂಡಿದ್ದರು? ಮತ್ತೆ ಬಿಡುಗಡೆ ಮಾಡಿದ್ದು ಏಕೆ? ಎನ್ನುವ ಸರಣಿ ಪ್ರಶ್ನೆಗಳಿಗೆ ಕಸ್ಟಮ್ಸ್ ಅಧಿಕಾರಿಗಳು ತುಟಿ ಬಿಚ್ಚುತ್ತಿಲ್ಲ.
ಇದು ಗಂಭೀರ ವಿಷಯವಾಗಿರುವುದರಿಂದ ಕಸ್ಟಮ್ಸ್ ಇಲಾಖೆಯ ಮಂಗಳೂರು ಆಯುಕ್ತರು ಮಾತ್ರ ಉತ್ತರಿಸಲು ಹಕ್ಕಿದೆ. ನಾವೇನೂ ಮಾಡುವಂತಿಲ್ಲ ಎಂಬ ಹಾರಿಕೆಯ ಉತ್ತರ ಲಭ್ಯವಾಗುತ್ತಿದೆ. ಆದರೆ, ಮಂಗಳೂರು ಆಯುಕ್ತರಿಗೆ ಕರೆ ಮಾಡಿದರೆ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಹಡಗಿನ ದಾಖಲಾತಿಗಳನ್ನು ಪರಿಶೀಲಿಸಿದ ನಂತರವೇ ಹಡಗನ್ನು ದುಬೈಗೆ ಕಳುಹಿಸಿರಬಹುದು ಎಂದು ಆಯುಕ್ತರ ಕಚೇರಿ ಸಿಬ್ಬಂದಿ ಹೇಳುತ್ತಾರೆ. ರಾಷ್ಟ್ರದ ಭದ್ರತೆ ದೃಷ್ಟಿಯಿಂದ ಇಂಥ ಹಡಗುಗಳ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳು ಗಮನವಿಡಬೇಕು. ಸೀಬರ್ಡ್ ನೌಕಾನೆಲೆ, ಅಣು ವಿದ್ಯುತ್ ಘಟಕಗಳು ಕಾರವಾರದಲ್ಲಿವೆ. ನೌಕಾನೆಲೆಯಲ್ಲಿ ವಿಕ್ರಮಾದಿತ್ಯ ಹಡಗು ಸಹ ಇದೆ. ಹೀಗಾಗಿ ಅಕ್ರಮವಾಗಿ ಪ್ರವೇಶಿಸುವ ಹಡಗುಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ. ಕಳೆದ ಶನಿವಾರವಷ್ಟೆ ಯಾವುದೇ ದಾಖಲೆಗಳಿಲ್ಲದೆ ಹಡಗು ಅಕ್ರಮವಾಗಿ ಭಾರತದ ಗಡಿಯನ್ನು ಪ್ರವೇಶಿಸಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದರು. ಆದರೆ, ಈಗ ಏಕಾಏಕಿ ಹಡಗು ನಾಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದ್ದಂತೂ ಹೌದು.