ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ರಥ ನಿಲುಗಡೆ: ಶ್ರೀಗಳ ದೂಷಣೆ ಖಂಡನೀಯ

Srinivasa Murthy VN
Updated On : 13 Mar 2014, 12:30 pm

ಗೋಕರ್ಣ: ಶಿವರಾತ್ರಿ ಮಹೋತ್ಸವ ಸಂದರ್ಭದಲ್ಲಿ ರಥ ನಿಲುಗಡೆಯಾದ ಘಟನೆ ಕುರಿತು ರಾಘವೇಶ್ವರ ಭಾರತಿ ಸ್ವಾಮೀಜಿ ಅವರನ್ನು ದೂಷಿಸುವುದು ಖಂಡನೀಯ ಎಂದು ಕ್ಷೇತ್ರದ ಉಪಾಧಿವಂತ ಮಂಡಳ ತಿಳಿಸಿದೆ.
ಇಲ್ಲಿನ ಕೆಕ್ಕಾರ ಮಠದಲ್ಲಿ ನಡೆದ ಉಪಾಧಿವಂತ ಮಂಡಳದ ಸಭೆಯಲ್ಲಿ ಈ ಕುರಿತು ವ್ಯಾಪಕ ಚರ್ಚೆ ನಡೆಸಿ, ರಥೋತ್ಸವ ನಿಂತಿರುವುದಕ್ಕೆ ಶ್ರೀಗಳೇ ಕಾರಣ ಎಂಬಂತೆ ದೂಷಿಸುವುದನ್ನು ಮಂಡಳ ಖಂಡಿಸಿದೆ.
ದೇವಾಲಯಕ್ಕೆ ಆಡಳಿತ ಮಂಡಳಿ ಇದೆ. ಅದು ದೇವಾಲಯದ ಎಲ್ಲ ಉಸ್ತುವಾರಿಯನ್ನು ನಡೆಸಿಕೊಂಡು ಬಂದಿದೆ. ಶ್ರೀಗಳ ಮಾರ್ಗದರ್ಶನದಲ್ಲಿ ಅಭಿವೃದ್ಧಿ ನಡೆಯುತ್ತಲಿದೆ. ದೇವಾಲಯದ ಸರ್ವತೋಮುಖ ಅಭಿವೃದ್ಧಿ ಶ್ರೀಗಳ ಗುರಿಯಾಗಿದೆ. ದೇವಾಲಯದ ಸ್ವಚ್ಛತೆ, ಕುಡಿಯುವ ನೀರು, ಭಕ್ತರಿಗಾಗಿ ಎರಡು ಹೊತ್ತು ನೀಡುವ ಅಮೃತಾನ್ನ ಪ್ರಸಾದ ಯೋಜನೆ, ಬಿಸಿಲು, ಮಳೆಯ ರಕ್ಷಣೆಗಾಗಿ ನೆರಳಿನ ವ್ಯವಸ್ಥೆ, ದೇವಾಲಯದ ಗರ್ಭಗುಡಿಯ ದ್ವಾರಕ್ಕೆ ಬೆಳ್ಳಿ ತಗಡಿನ ಜೋಡಣೆ, ಸಂಪೂರ್ಣವಾಗಿ ಅಜೀರ್ಣಗೊಂಡಿರುವ ಆದಿಗೋಕರ್ಣ ದೇವಾಲಯವನ್ನು ಸಂಪೂರ್ಣ ಶಿಲಾಮಯ ಹಾಗೂ ವಾಸ್ತುಶಾಸ್ತ್ರದಂತೆ ನಿರ್ಮಾಣ ಕಾರ್ಯಕ್ಕೆ ಅಡಿಗಲ್ಲು ಪೂಜೆ ನೆರವೇರಿದೆ. ಇವೆಲ್ಲ ಅಭಿವೃದ್ಧಿಗಳ ಬಗ್ಗೆ ಗಮನಹರಿಸದೆ ಕೇವಲ ರಥೋತ್ಸವದ ಬಗ್ಗೆ ಆರೋಪಿಸುವುದು ಎಷ್ಟು ಸರಿ ಎಂದಿರುವ ಮಂಡಳ ಶ್ರೀಗಳ ದೂಷಣೆಯನ್ನು ಸಂಪೂರ್ಣವಾಗಿ ಖಂಡಿಸುವ ನಿರ್ಣಯ ಕೈಗೊಂಡಿದೆ.
ಲೋಕ ಶಾಂತಿಗಾಗಿ ಪ್ರಾರ್ಥನೆ: ರಥೋತ್ಸವ ನಿಂತ ಬಗ್ಗೆ ಪರಿಹಾರವಾಗಿ ಪ್ರಾಯಶ್ಚಿತ್ತವನ್ನು ನಡೆಸಿ ಲೋಕ ಶಾಂತಿಗಾಗಿ ಪ್ರಾರ್ಥಿಸಲಾಗುತ್ತದೆ. ಅಲ್ಲಿ ಯಾವುದೇ ಅನುಮಾನ ಬೇಡ. ಮುಂದಿನ ದಿನಗಳಲ್ಲಿ ರಥೋತ್ಸವವನ್ನು ನಡೆಸಲಾಗುತ್ತದೆ. ಭಕ್ತರಲ್ಲಿ ಗೊಂದಲ ಬೇಡವೆಂದು ಮಂಡಳ ತಿಳಿಸಿದೆ. ವೇದಿಕೆಯಲ್ಲಿ ಉಪಾಧಿವಂತ ಮಂಡಳದ ಅಧ್ಯಕ್ಷ ಗಣೇಶ ಹಿರೇಗಂಗೆ, ನಾರಾಯಣ ಪಂಡಿತ, ನರಸಿಂಹ ಶಾಸ್ತ್ರಿ, ಕಾರ್ಯದರ್ಶಿ ಬಾಲಕೃಷ್ಣ ಜಂಭೆ ಇದ್ದರು.
ವೇ.ಮೂ. ಸುಬ್ರಹ್ಮಣ್ಯ ಚಿತ್ರಿಗೆಮಠ, ಆಣ್ಣಯ್ಯ ಗಾಯತ್ರಿ, ಗಣಪತಿ ಜಿ. ಚಿತ್ರಿಗೆಮಠ, ಗಣೇಶ ಪೂರ್ಣಮಠ, ಸುಬ್ರಹ್ಮಣ್ಯ ಶಂಕರಲಿಂಗ, ಪರಮೇಶ್ವರ ಮಾರ್ಕಾಂಡೆ, ಮಹಾಬಲೇಶ್ವರ ಶಾಸ್ತ್ರಿ, ಮಹಾಬಲೇಶ್ವರ ಮಾರಿಗೋಳಿ, ರಾಮಾ ಮಾಸ್ಕೇರಿ, ದತ್ತಾತ್ರೇಯ ಹಿರೇಗಂಗೆ, ರಾಧಾಕೃಷ್ಣ ಸರ್ಸು, ಗಣೇಶ ಜಂಭೆ, ಎಸ್.ಜಿ. ಕೂರ್ಸೆ ಪಾಲ್ಗೊಂಡಿದ್ದರು. ಮೊದಲು ಉಪಾಧಿವಂತ ಮಂಡಳದ ಅಧ್ಯಕ್ಷ ಜಿ.ಎನ್. ಹಿರೇಗಂಗೆ ಸ್ವಾಗತಿಸಿದರು. ಕಾರ್ಯದರ್ಶಿ ಬಾಲಕೃಷ್ಣ ಜಂಭೆ ವರದಿ ವಾಚಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement