ರೌಡಿ ಶೀಟ್, ಗೂಂಡಾ ಕಾಯ್ದೆಗೆ ತಾತ್ಕಾಲಿಕ ತಡೆ
ಮಂಗಳೂರು: ಚುನಾವಣೆ ಆಯೋಗ ತೀವ್ರ ನಿಗಾ ಇರುವ ಹಿನ್ನೆಲೆಯಲ್ಲಿ ಇನ್ನು ಮೂರು ತಿಂಗಳು ರೌಡಿಶೀಟ್ ತೆರೆಯುವ ಕೆಲಸ ಸ್ಥಗಿತಗೊಳಿಸುವಂತೆ ಎಲ್ಲ ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೆ ಗೃಹ ಇಲಾಖೆ ಅಧಿಕಾರಿಗಳಿಂದ ಮೌಖಿಕ ಆದೇಶ ಬಂದಿದೆ.
'ಹಿಂದು ಕಾರ್ಯಕರ್ತರ ಮೇಲೆ ರೌಡಿಶೀಟ್' ವಿಶೇಷ ವರದಿ ಮಾ.12ರಂದು ಕನ್ನಡಪ್ರಭದಲ್ಲಿ ಪ್ರಕಟವಾಗಿತ್ತು. ರಾಜಕೀಯ ಪ್ರೇರಿತ ರೌಡಿ ಶೀಟ್, ಗೂಂಡಾ ಕಾಯ್ದೆ ಜಾರಿಗೊಳಿಸಿದರೆ ಚುನಾವಣೆಯಲ್ಲಿ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಇದನ್ನು ತಾತ್ಕಾಲಿಕವಾಗಿ ಹಿಂದೆಗೆದುಕೊಳ್ಳಲು ಗೃಹ ಸಚಿವರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
'ಚುನಾವಣೆ ಫಲಿತಾಂಶ ಬರುವವರೆಗೆ ಯಾವುದೇ ರೌಡಿ ಲೀಸ್ಟ್ ಮಾಡಬೇಡಿ. ಫಲಿತಾಂಶ ಬಂದ ಒಂದು ತಿಂಗಳವರೆಗೂ ಸುಮ್ಮನೆ ಇರಿ. ಬಳಿಕ ಪ್ರಕ್ರಿಯೆ ಮುಂದುವರಿಸಿ' ಎಂಬ ಸಂದೇಶ ಬಂದಿರುವುದನ್ನು ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟ ಪಡಿಸಿದ್ದಾರೆ. ಈ ಬಗ್ಗೆ ಗೃಹ ಇಲಾಖೆಯಲ್ಲಿ ಭಾರಿ ಚರ್ಚೆ ಯಾಗಿದೆ. ಚುನಾವಣೆ ಆಯೋಗ ಕ್ರಮ ತೆಗೆದುಕೊಂಡರೆ ಸಮಸ್ಯೆ ಆಗಬಹುದು. ರೌಡಿ ಲಿಸ್ಟ್ ತಡೆ ಹಿಡಿಯುವ ಬಗ್ಗೆ ಗೃಹಸಚಿವರೇ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 'ರೌಡಿ ಶೀಟರ್ ತೆರೆಯದಂತೆ ತಡೆಹಿಡಿಯುವ ಅದೇಶದ ಲಿಖಿತ ಪ್ರತಿ ಇದ್ದರೆ ತನ್ನಿ ಬಳಿಕ ಪ್ರತಿಕ್ರಿಯಿಸುತ್ತೇನೆ 'ಎಂದು ಪ್ರಭಾರ ಐಜಿಪಿ ಆರ್.ಹಿತೇಂದ್ರ ತಿಳಿಸಿದ್ದಾರೆ.