ಅಪರಿಚಿತ ವಾಹನ ಡಿಕ್ಕಿ: ಪಾದಚಾರಿ ಸಾವು
ಪುತ್ತೂರು: ನೆಹರುನಗರದ ಮುರ ಸಮೀಪ ಅಪರಿಚಿತ ವಾಹನ ಡಿಕ್ಕಿಯಾಗಿ ಪಾದಚಾರಿ ಮೃತಪಟ್ಟ ಘಟನೆ ಶನಿವಾರ ತಡರಾತ್ರಿ ನಡೆದಿದ್ದು, ಭಾನುವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ನೆಹರುನಗರ ಗಣೇಶ್ಭಾಗ್ ನಿವಾಸಿ ತುಕ್ರ (65) ಮೃತರು. ಅವರು ಕುಟುಂಬದ ನೇಮ ಕಾರ್ಯದ ದಿನ ನಿಗದಿಪಡಿಸಲು ಶನಿವಾರ ಮಧ್ಯಾಹ್ನ ಮಾಣಿಯ ಸಂಬಂಧಿಕರ ಮನೆಗೆ ಹೋಗಿದ್ದರು. ರಾತ್ರಿ ಮನೆಗೆ ಬಂದಿರಲಿಲ್ಲ. ಅವರು ಮಾಣಿಯಲ್ಲೇ ಉಳಿದುಕೊಂಡಿರಬಹುದು ಎಂದು ಮನೆ ಮಂದಿ ವಿಚಾರಿಸಲು ಹೋಗಿರಲಿಲ್ಲ. ಭಾನುವಾರ ಬೆಳಗ್ಗೆ ಮುರ ರಸ್ತೆ ಬದಿಯಲ್ಲಿ ತುಕ್ರ ಮೃತದೇಹ ಪತ್ತೆಯಾಗಿರುವುದು ಸ್ಥಳೀಯರಿಂದ ತಿಳಿದುಬಂತು. ವಾಹನ ಡಿಕ್ಕಿಯಾಗಿ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ. ಮೃತರಿಗೆ ಪತ್ನಿ, ಮೂವರು ಪುತ್ರರು ಹಾಗೂ ಮೂವರು ಪುತ್ರಿಯರಿದ್ದಾರೆ.
ರಿಕ್ಷಾ ಡಿಕ್ಕಿ; ಪಾದಚಾರಿ ವ್ಯಕ್ತಿ ಗಂಭೀರ
ಉಪ್ಪಿನಂಗಡಿ: ನೆಲ್ಯಾಡಿ ಪೇಟೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಚೋಮ (45) ಎಂಬವರು ಗಂಭೀರವಗಿ ಗಾಯಗೊಂಡ ಘಟನೆ ಭಾನುವಾರ ಸಂಭವಿಸಿದೆ. ಗಾಯಾಳು ಚೋಮ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಪುತ್ತೂರು ಟ್ರಾಫಿಕ್ ಪೊಲೀಸರು ಆರೋಪಿ, ರಿಕ್ಷಾ ಚಾಲಕ ಸುಜಿತ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೋಣಾಜೆ ರಕ್ಷಿತಾರಣ್ಯದಲ್ಲಿ ಕಾಡ್ಗಿಚ್ಚು
ಉಪ್ಪಿನಂಗಡಿ: ಇಲ್ಲಿನ ವಲಯ ಅರಣ್ಯ ವ್ಯಾಪ್ತಿಗೆ ಸೇರಿದ ಉದನೆ ಸಮೀಪದ ಶಿರ್ವತಡ್ಕ, ಸುಬ್ರಹ್ಮಣ್ಯ ವಲಯ ವ್ಯಾಪ್ತಿಯ ಕೋಣಾಜೆ ರಕ್ಷಿತಾರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ಶ್ರಮಿಸುತ್ತಿರುವ ಬಗ್ಗೆ ವರದಿಯಾಗಿದೆ. ಕಳೆದ ಎರಡು ಮೂರು ದಿನಗಳಿಂದ ಕಾಡಿನ ಅಯಕಟ್ಟಿನ ಜಾಗದಲ್ಲಿ ಬೆಂಕಿ ಕಾಣಿಸಿಕೊಳ್ಳುವ ಘಟನಾವಳಿಗಳು ನಡೆಯುತ್ತಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಗರಿಷ್ಠ ಜಾಗೃತಿಯಲ್ಲಿ ನೆಲೆಗೊಳಿಸಲಾಗಿದೆ. ಶಿರ್ವತಡ್ಕ ಕಾಡಿನಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಲು ಈಗಾಗಲೇ 25ಕ್ಕೂ ಅಧಿಕ ಸಿಬ್ಬಂದಿ ಸ್ಥಳೀಯ ಜನರ ಜೊತೆಗೂಡಿ ಕಾರ್ಯಾಚರಣೆ ಕೈಗೊಂಡಿದ್ದು, ಕಳೆದೆರಡು ದಿನಗಳಿಂದ ಗರಿಷ್ಠ ಸಾಧ್ಯ ಯಶಸ್ಸು ಸಾಧಿಸಲಾಗಿದೆ ಎಂದು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಹರ್ಷ ತಿಳಿಸಿದ್ದಾರೆ. ಈ ಮಧ್ಯೆ ಸುಬ್ರಹ್ಮಣ್ಯ ವಲಯಕ್ಕೆ ಸೇರಿರುವ ಕೋಣಾಜೆ ಕಾಡಿನಲ್ಲಿನ ಉದನೆ ಸಮೀಪದ ನದಿ ಇನ್ನೊಂದು ಪಾರ್ಶ್ವದಲ್ಲಿ ಕಾಡ್ಗಿಚ್ಚು ಪ್ರಸಹರಿಸಿದ ಬಗ್ಗೆ ಭಾನುವಾರ ರಾತ್ರಿ ಮಾಹಿತಿ ಬಂದಿದ್ದು, ಬೆಂಕಿಯನ್ನು ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಇತ್ತ ಕಾಡಿನ ಅಯಕಟ್ಟಿನ ಸ್ಥಳಗಳೆಲ್ಲವೂ ಕೆಲ ದಿನಗಳಿಂದ ಅಗ್ನಿಗಾಹುತಿಯಾಗುತ್ತಿರುವ ಬಗ್ಗೆ ಸಂಶಯಗಳು ಮೂಡುತ್ತಿದ್ದು, ಸ್ಥಳೀಯ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಕಾಡಿಗೆ ಅಗ್ನಿಸ್ಪರ್ಶ ಮಾಡುತ್ತಿರುವ ಕೃತ್ಯದ ಬಗ್ಗೆಯೂ ಮಾಹಿತಿಗಳು ಬರುತ್ತಿವೆ.