ಕಳೆದ ಬಾರಿ ಬಿಜೆಪಿಗೆ ಅಚ್ಚರಿಯ ಗೆಲವಾಗಿತ್ತು!
-ಆತ್ಮಭೂಷಣ್
ಮಂಗಳೂರು: ದಕ್ಷಿಣ ಕನ್ನಡ ಕ್ಷೇತ್ರದಲ್ಲಿ (ಮಂಗಳೂರು) 2009ರ ಲೋಕಸಭೆ ಚುನಾವಣೆ ಬಿಜೆಪಿಗೆ ಅಚ್ಚರಿಯ ಗೆಲವು ತಂದಿತ್ತರೆ, ಗೆಲವಿನ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ಗೆ ಅನಿರೀಕ್ಷಿತ ಸೋಲು ತಂದಿತ್ತು.
ಆಗ ಎಲ್ಲೆಡೆಗೆ ಚರ್ಚ್, ಪಬ್ ದಾಳಿ ಬಿಜೆಪಿಗೆ ಪ್ರತಿಕೂಲ ಪರಿಸ್ಥಿತಿಯನ್ನು ತಂದೊಡ್ಡಿತ್ತು. ಬಿಜೆಪಿ ಹೊಸ ಮುಖವನ್ನು ಕಣಕ್ಕಿಳಿಸಿತ್ತು. ಆದರೆ ಅದನ್ನು ಯಶಸ್ವಿಯಾಗಿ ನಿಭಾಯಿಸಿದ ಬಿಜೆಪಿ, ಮತಎಣಿಕೆಯಲ್ಲಿ ಗೆಲವಿನ ನಗು ಬೀರಿತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಸೋಲು ಕಂಡರು. ಬಿಜೆಪಿಯ ನಳಿನ್ ಕುಮಾರ್ ಕಟೀಲ್ ಭಾರಿ ಅಂತರದಲ್ಲಿ ಗೆಲವು ಪಡೆದರು. ಬಿಜೆಪಿ ಗೆಲವಲ್ಲಿ ಸಂಘಪರಿವಾರ ಪ್ರಮುಖ ಪಾತ್ರ ವಹಿಸಿದ್ದರೆ, ಕಾಂಗ್ರೆಸ್ನ್ನು ಕಾಂಗ್ರೆಸಿಗರೇ ಸೋಲಿಸಿದ್ದರು!
ಆ ಚುನಾವಣೆಯಲ್ಲಿ ಒಟ್ಟು 11 ಮಂದಿ ಕಣದಲ್ಲಿದ್ದರು. ಬಿಜೆಪಿಯ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್ನ ಜನಾರ್ದನ ಪೂಜಾರಿ, ಬಿಎಸ್ಪಿಯ ಗಿರೀಶ್ ರೈ ಅಲೆಕ್ಕಾಡಿ, ಸಿಪಿಎಂ ಮಾಧವ, ವಿಚಾರವಾದಿ ಆನಂದ ಗಟ್ಟಿ, ಡಾ.ತಿರುಮಲರಾಯ ಹಳೆಮನೆ, ಮಹಮ್ಮದ್ ಸಾಲಿ, ಕೆ.ರಾಮಭಟ್, ವಾಸುದೇವ ಗೌಡ, ಡಾ.ಯು.ಪಿ.ಶಿವಾನಂದ, ಸುಬ್ರಹ್ಮಣ್ಯ ಕುಮಾರ್ ಕುಂಟಿಕಾನಮಠ (ಪಕ್ಷೇತರರು)ಸ್ಪರ್ಧಿಸಿದ್ದರು. ಜೆಡಿಎಸ್ ಪಕ್ಷ ಸಿಪಿಎಂನ್ನು ಬೆಂಬಲಿಸಿ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ.
ಶೇ.74.61 ಮತದಾನವಾಗಿತ್ತು: ಈ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಒಟ್ಟು ಶೇ.74.61 ಮತದಾನವಾಗಿತ್ತು. ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ 4,99,059 ಮತ ಪಡೆದರೆ, ಕಾಂಗ್ರೆಸ್ನ ಜನಾರ್ದನ ಪೂಜಾರಿ 4,58,875 ಮತ ಪಡೆದಿದ್ದರು. ನಳಿನ್ ಕುಮಾರ್ 40,184 ಮತ ಅಂತರದಿಂದ ಗೆಲವು ಪಡೆದಿದ್ದರು. ಬಿಜೆಪಿ ಶೇ.49.15 ಹಾಗೂ ಕಾಂಗ್ರೆಸ್ ಶೇ.45.17 ಮತ ದಾಖಲಿಸಿತ್ತು.
ಉಳಿದಂತೆ ಬಿಎಸ್ಪಿ ಅಭ್ಯರ್ಥಿ ಗಿರೀಶ್ ರೈ 10,193 ಮತ, ಸಿಪಿಎಂ ಮಾಧವ 18,326, ಪಕ್ಷೇತರರಾದ ಆನಂದ ಗಟ್ಟಿ 2,373, ಡಾ.ತಿರುಮಲರಾಯ 1,801, ಮಹಮ್ಮದ್ ಸಾಲಿ 1,977, ಕೆ.ರಾಮಭಟ್ 5958, ವಾಸುದೇವ 3,180, ಯು.ಪಿ.ಶಿವಾನಂದ 4,825, ಸುಬ್ರಹ್ಮಣ್ಯ ಕುಮಾರ್ 8,931 ಮತ ಪಡೆದಿದ್ದರು.
8 ವಿಧಾನಸಭೆ ಕ್ಷೇತ್ರಗಳಲ್ಲಿ ಒಟ್ಟು 10,61,333 ಮತದಾರರಲ್ಲಿ 10,15,498 ಮತ ಚಲಾಯಿಸಿದ್ದರು.