ಜೈಲು ಹಕ್ಕಿಗಳಿಗೆ ಬಿಡುಗಡೆ ಭಾಗ್ಯ!
ಸಣ್ಣ ಪುಟ್ಟ ಕೇಸ್‌ಗಳ ಇತ್ಯರ್ಥಕ್ಕೆ ನಾಳೆ ಜೈಲ್ ಅದಾಲತ್
-ಜಿತೇಂದ್ರ ಕುಂದೇಶ್ವರ
ಮಂಗಳೂರು: ಸಣ್ಣಪುಟ್ಟ ಕೇಸ್‌ಗಳಿಗೆ ಜೈಲ್ ಪಾಲಾಗಿ ಜಾಮೀನು ಸಲ್ಲಿಸಲು ಹಣಕಾಸು ಕೊರತೆ ಇರುವ ಕೈದಿಗಳ ಬಿಡುಗಡೆಗೆ ಭಾಗ್ಯ ಒದಗಿ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ ಇತಿಹಾಸದಲ್ಲಿಯೇ ಮೊತ್ತ ಮೊದಲ ಬಾರಿಗೆ ಮಾ.18ರಂದು ಜೈಲ್ ಅಧೀಕ್ಷರು ಜೈಲ್ ಅದಾಲತ್ ಆಯೋಜಿಸಿದ್ದಾರೆ.
ಕಾನೂನು ಸೇವಾ ಪ್ರಾಧಿಕಾರ ಮುಖ್ಯಸ್ಥರೂ ಆಗಿರುವ ಚೀಫ್ ಜುಡೀಶಿಯಲ್ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ಅದಾಲತ್ ನಡೆಯಲಿದೆ. ಸಣ್ಣಪುಟ್ಟ ಪ್ರಕರಣಗಳಿಗೆ ರೌಡಿ ಶೀಟರ್ ತೆರೆಯುತ್ತಿರುವ ಈ ಸಂದರ್ಭದಲ್ಲಿ ಜೈಲ್‌ನಲ್ಲಿರುವ ಸಣ್ಣಪುಟ್ಟ ಪ್ರಕರಣದ ಕೈದಿಗಳಿಗೆ ಬಿಡುಗಡೆ ಅವಕಾಶ ಲಭಿಸುತ್ತಿದೆ. ಜೈಲ್ ಒಳಭಾಗದಲ್ಲಿ ಸರಿಯಾಗಿ ಸೆಲ್‌ಗಳನ್ನು ನಿರ್ಮಿಸಲಾಗಿಲ್ಲ. ಸರಿಯಾದ ಮೂಲ ಸೌಕರ್ಯಗಳಿಲ್ಲ. ಆಟವಾಡಲು ಅವಕಾಶ ಇಲ್ಲ. ಕೈದಿಗಳ ಸಂಖ್ಯೆ ಒಂದೇ ಸಮನೆ ಏರುತ್ತಿದೆ. ಜೈಲ್ ಅದಾಲತ್‌ನಿಂದ ಕೈದಿಗಳ ಸಂಖ್ಯೆಯೂ ಕಡಿಮೆಯಾಗಲಿದೆ.
ಭಾರತೀಯ ದಂಡ ಸಂಹಿತೆಯಡಿ 498 (ಎ) ಸೆಕ್ಷನ್ ಅಂದ್ರೆ ಗಂಡ ಹೆಂಡರ ಜಗಳ, ಚೆಕ್ ಬೌನ್ಸ್ ಕೇಸ್, ಬೆದರಿಕೆ, ಕೈಯಿಂದ ಹೊಡೆದದ್ದು, ಇತ್ಯಾದಿ ಐಪಿಸಿ 323. 324, 503 506 ಸೆಕ್ಷನ್ ಗಳಡಿ ಜೈಲ್‌ನಲ್ಲಿ ಇರುವ ಕೈದಿಗಳ ಬಿಡುಗಡೆಗಾಗಿ ಜೈಲ್ ಅದಾಲತ್ ನಡೆಯುತ್ತಿದೆ ಎಂದು ಜೈಲ್ ಅಧೀಕ್ಷಕ ಪಿ.ಎಸ್. ರಮೇಶ್ ತಿಳಿಸಿದ್ದಾರೆ.
ಇಷ್ಟು ದಿನ ಜೈಲ್‌ನಲ್ಲಿ ಇದ್ದನಲ್ಲ, ಮಾಡಿದ ತಪ್ಪಿಗೆ ಶಿಕ್ಷೆಯಾಗಿದೆ ಎಂದು ದೂರುದಾರರು ತಿಳಿದುಕೊಂಡು ಕೇಸ್ ಕ್ಲೋಸ್ ಮಾಡಲು ಒಪ್ಪಿದರೆ ಮಾತ್ರ ಕೈದಿ ಬಿಡುಗಡೆಯಾಗಲು ಸಾಧ್ಯ. ಆರೋಪಿಯೂ ಪ್ರಾಯಶ್ಚಿತ್ತ ಆಗಿದೆ ಇನ್ನು ತಪ್ಪು ಮಾಡುವುದಿಲ್ಲ ಎಂಬ ಭರವಸೆ ಮೇರೆಗೆ ಪ್ರಕರಣವನ್ನು ಅಲ್ಲಿಗೆ ಮುಗಿಸಲಾಗುತ್ತದೆ.
ಚೆಕ್ ಬೌನ್ಸ್ ಪ್ರಕರಣದಲ್ಲಿ ಚೆಕ್ ಮೌಲ್ಯದ ಸ್ವಲ್ಪ ಭಾಗ ಹಣವನ್ನು ನೀಡಿದರೆ ಅಥವಾ ಭರವಸೆ ನೀಡಿದರೆ ಎರಡೂ ಕಡೆಯವರು ಒಮ್ಮತದಂತೆ ಕೇಸ್ ಕ್ಲೋಸ್ ಮಾಡಲಾಗುವುದು. ಎರಡು ಕಡೆಯವರು ಟೇಬಲ್ ಮುಂದೆ ಕುರ್ಚಿ ಹಾಕಿಸಿ ಎದುರು ಬದುರು ಕುಳ್ಳಿರಿಸಿ ಆಪ್ತ ಸಲಹೆ ಮೂಲಕ ಇತ್ಯರ್ಥ ಮಾಡಲಾಗುತ್ತದೆ. ಚೀಪ್ ಜುಡೀಶಿಯಲ್ ಮ್ಯಾಜಿಸ್ಟ್ರೇಟ್ ಅದಾಲತ್ ನಡೆಸುತ್ತಾರೆ.
'ನಾವು ಕೇವಲ ಮಧ್ಯವರ್ತಿಗಳ ಕೆಲಸ ಮಾಡುತ್ತೇವೆ. ಯಾರ ಮೇಲೂ ಒತ್ತಡ ಹಾಕುವುದಿಲ್ಲ. ಅದಾಲತ್ ನಡೆಸುವ ಮುನ್ನ ಸಣ್ಣಪುಟ್ಟ ಪ್ರಕರಣಗಳಿರುವ ಕೈದಿಗಳ ಪಟ್ಟಿ ಮಾಡಲಾಗುತ್ತದೆ. ದೂರು ನೀಡಿದವರ ವಿವರ ಪಡೆದು ಅವರನ್ನು ಸಂಪರ್ಕಿಸುತ್ತೇವೆ. ಅವರ ಬಳಿ ಸಂಪೂರ್ಣ ವಿಚಾರ ತಿಳಿಸಿ ಅವರು ಒಪ್ಪಿದರೆ ಮಾತ್ರ ಅದಾಲತ್‌ಗೆ ಕರೆಸುತ್ತೇವೆ. ದೂರುದಾರರು ಒಪ್ಪದೇ ಇದ್ದರೆ ಅಂತಹ ಕೈದಿಗಳಿಗೆ ಅದಾಲತ್‌ನಲ್ಲಿ ಭಾಗವಹಿಸುವ ಅವಕಾಶ ಇಲ್ಲ' ಎಂದು ಅಧೀಕ್ಷಕ ರಮೇಶ್ ಹೇಳುತ್ತಾರೆ.
ಪರಪ್ಪನ ಕೇಂದ್ರ ಕಾರಾಗೃಹದಲ್ಲಿ ಇಂಥ ಜೈಲ್ ಅದಾಲತ್‌ಗಳು ನಡೆಯುತ್ತವೆ. ಉಳಿದೆಡೆಯೂ ಜೈಲ್ ಅದಾಲತ್ ನಡೆಸಬೇಕು ಎಂಬುದು ಮ್ಯಾನುವೆಲ್‌ನಲ್ಲಿ ಇದೆ. ಆದರೆ ಪಾಲನೆ ಆಗುತ್ತಿಲ್ಲ.