ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸಕಲರ ಸಮಾನತೆಯಿಂದ ಕಾಣುವ ಹಂಬಲ ಹೊಂದಿದ್ದ ಕುವೆಂಪು: ಡಾ.ಶ್ರೀಕಂಠ ಕೂಡಿಗೆ

Srinivasa Murthy VN
Updated On : 17 Mar 2014, 10:38 am

ಪುತ್ತೂರು: ಜಾತಿ ಸೂಚಕ ಗುಣಗಳನ್ನು ವಿರೋಧಿಸುತ್ತಿದ್ದ ಕುವೆಂಪು ಯಾರನ್ನೂ ವಿರೋಧಿಸದೆ ಎಲ್ಲರನ್ನೂ ಸಮಾನತೆಯಿಂದ ಕಾಣುವ ಹಂಬಲ ಹೊಂದಿದ್ದರು ಎಂದು ಕುವೆಂಪು ವಿಶ್ವವಿದ್ಯಾನಿಲಯ ವಿಶ್ರಾಂತ ಪ್ರಾಧ್ಯಾಪಕ ಡಾ. ಶ್ರೀಕಂಠ ಕೂಡಿಗೆ ಹೇಳಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ದ.ಕ. ಜಿಲ್ಲೆ, ತಾಲೂಕು ಘಟಕ ಹಾಗೂ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘ ಆಶ್ರಯದಲ್ಲಿ ತೀರ್ಥಹಳ್ಳಿ ಕುಪ್ಪಳ್ಳಿ ಕುವೆಂಪು ಪ್ರತಿಷ್ಠಾನ ಸಹಯೋಗದಲ್ಲಿ ಭಾನುವಾರ ಇಲ್ಲಿನ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ 'ರಾಷ್ಟ್ರಕವಿ ಕುವೆಂಪು ನೆನಪು' ವಿಶೇಷ ಸಾಹಿತ್ಯ ಕಾರ್ಯಕ್ರಮದಲ್ಲಿ ಕುವೆಂಪು ಸಾಹಿತ್ಯ- ವೈಚಾರಿಕತೆ ವಿಷಯದ ಕುರಿತು ಅವರು ಮಾತನಾಡಿದರು.
ಜಾತಿವಾದಿಗಳು ಹೆಚ್ಚಾದಂತೆ ಮೌಢ್ಯವಾದಿಗಳ ಸಂಖ್ಯೆ ಹೆಚ್ಚುತ್ತಿದೆ. ಮೌಢ್ಯತೆ, ಕೋಮುವಾದಿ ವಿಚಾರಗಳು ಅಕ್ಷರಸ್ಥರಲ್ಲೂ ಹೆಚ್ಚಾಗುತ್ತಿವೆ. ಇವುಗಳಿಂದ ಹೊರತಾದ ಜೀವನ ಮೌಲ್ಯ ರೂಢಿಸಿಕೊಂಡು ಜೀವನ ವಿರೋಧಿ ನೀತಿಯನ್ನು ತಿರಸ್ಕರಿಸಬೇಕಿದೆ. ಪ್ರಸಕ್ತ ಸನ್ನಿವೇಶದಲ್ಲಿ ಕುವೆಂಪು ವಿಶ್ವಮಾನವ ತತ್ವ ಹೆಚ್ಚು ಪ್ರಸ್ತುತ ಎಂದರು.
ಶೌಚಾಲಯಗಳಿಂದ ಒಂದುಗೂಡಿಸುವ ಕೆಲಸ: ಗುಡಿ, ಮಸೀದಿ, ಕ್ರೈಸ್ತ ಮಂದಿರಗಳು ಮನುಷ್ಯರನ್ನು ಪ್ರತ್ಯೇಕಿಸುವ ಕೆಲಸ ಮಾಡುತ್ತಿದ್ದರೆ, ಶೌಚಾಲಯಗಳು ಒಂದುಗೂಡಿಸುವ ಕೆಲಸ ಮಾಡುತ್ತಿವೆ ಎಂದು ಮಾರ್ಮಿಕವಾಗಿ ಹೇಳಿದ ಡಾ.ಶ್ರೀಕಂಠ, ನಿರ್ಮಲ ಭಾರತದ ಕನಸನ್ನು ಇಟ್ಟುಕೊಂಡಿದ್ದ ಕುವೆಂಪು, ಗುಡಿ, ಮಂದಿರ ಬಿಟ್ಟು ಹೊರಬರಲು ಅಂದೇ ಕರೆ ನೀಡಿದ್ದರು. ಪ್ರಭುತ್ವ, ರಾಜಕಾರಣಕ್ಕೆ ಎಂದೂ ತಲೆಬಾಗದ ಅವರು ಮನೆಮನದ ತಪಸ್ವಿ ಎಂದು ವರ್ಣಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುವೆಂಪು ಅಳಿಯ, ಕುವೆಂಪು ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಕೆ. ಚಿದಾನಂದ ಗೌಡ ಮಾತನಾಡಿ, ಪ್ರಕೃತಿ ಪ್ರೀತಿ, ಕನ್ನಡ ಮತ್ತು ಅಖಂಡ ಕರ್ನಾಟಕ, ವೈಜ್ಞಾನಿಕ ದೃಷ್ಟಿ ಮತ್ತು ವೈಚಾರಿಕತೆ, ಆಧ್ಯಾತ್ಮ ಕುವೆಂಪು ಜೀವನದ ಪ್ರಮುಖ ಅಂಶಗಳು ಎಂದರು.
'ನಾನು ಊರಿಗೆ ಹೋಗಿ ಬಂದಾಗ ಕುವೆಂಪು ಮೊದಲು ಕೇಳುತ್ತಿದ್ದ ಪ್ರಶ್ನೆಯೆಂದರೆ ಮಡಿಕೇರಿಯ ಕಾಡುಗಳು ಹೇಗಿವೆ ಎಂದು. ಅವರು ಕಾಡನ್ನು ಎಷ್ಟು ಪ್ರೀತಿಸುತ್ತಿದ್ದರೆಂದರೆ ಅವರ ಮನೆಯ ಸುತ್ತಲಿನ ಮರಗಳನ್ನು ಕಡಿಯದೆ ಹಾಗೆ ಉಳಿಸಿಕೊಡಬೇಕೆಂದು ಸರ್ಕಾರಕ್ಕೆ ಮನವಿಯನ್ನೂ ಮಾಡಿದ್ದರು. ಸರ್ಕಾರ ಅದಕ್ಕೆ ಸಮ್ಮತಿ ನೀಡಿತ್ತು ಎಂದು ಡಾ. ಕೆ.ಚಿದಾನಂದ ಸ್ಮರಿಸಿದರು.
ಕುವೆಂಪು ಪುತ್ರಿ ತಾರಿಣಿ ಚಿದಾನಂದ, ಅಳಿಯ ಡಾ.ಕೆ. ಚಿದಾನಂದ ಕುವೆಂಪು ಅವರ ಬದುಕು ಮತ್ತು ಚಿಂತನೆಯ ಕುರಿತು ಮಾತನಾಡಿದರು.
ಸಾಹಿತಿ ಡಾ.ತಾಳ್ತಜೆ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಒಕ್ಕಲಿಗ ಗೌಡ ಸಂಘ ಗೌರವಾಧ್ಯಕ್ಷ ಮೋಹನ್ ಗೌಡ ಇಡ್ಯಡ್ಕ, ಕುವೆಂಪು ಪ್ರತಿಷ್ಠಾನದ ಪ್ರಕಾಶ್ ಕಡಿದಾಳ್, ಕನ್ನಡ ಸಾಹಿತ್ಯ ಪರಿಷತ್‌ನ ವತ್ಸಲಾ ರಾಜ್, ಕಾರ್ಯಕ್ರಮ ಸಂಚಾಲಕರಾದ ಲಿಂಗಪ್ಪ ಗೌಡ, ರವಿ ಮುಂಗ್ಲಿಮನೆ, ಗೌಡ ಸಂಘದ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ನೆಲ್ಲಿಕಟ್ಟೆ ಇದ್ದರು.
ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಅಧ್ಯಕ್ಷ ಡಾ. ವರದರಾಜ್ ಚಂದ್ರಗಿರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಒಕ್ಕಲಿಗ ಗೌಡ ಸೇವಾ ಸಂಘ ಅಧ್ಯಕ್ಷ ಚಿದಾನಂದ ಬೈಲಾಡಿ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಪ್ರಧಾನ ಕಾರ್ಯದರ್ಶಿ ಎನ್.ಕೆ. ಜಗನ್ನಿವಾಸ್ ರಾವ್ ವಂದಿಸಿದರು. ಇಂಡಸ್ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ ಹಾಗೂ ಉಪನ್ಯಾಸಕಿ ಹರಿಣಾಕ್ಷಿ ಕೇವಳ ನಿರೂಪಿಸಿದರು.
ಬಳಿಕ ಹಾಸ್ಯಗೋಷ್ಠಿಯನ್ನು ಎಚ್.ಡುಂಡಿರಾಜ್ ಹಾಗೂ ಎಂ.ಎಸ್.ನರಸಿಂಹ ಮೂರ್ತಿ ನಡೆಸಿಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement