ಆರ್‌ವಿಡಿಗೆ ಜನರೇ ಉತ್ತರ ನೀಡುವರು
ದಾಂಡೇಲಿ: ಜಿಲ್ಲೆಯ ರಾಜಕಾರಣದ ಪ್ರತಿ ಹಂತದಲ್ಲೂ ಸಚಿವ ಆರ್.ವಿ. ದೇಶಪಾಂಡೆಯವರು ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ದಲಿತರಿಗೆ ಸಿಗಬಹುದಾಗಿದ್ದ ಅಧಿಕಾರದ ಅವಕಾಶ ತಪ್ಪಿಸಿ ಮೋಸ ಮಾಡಿದ್ದಾರೆ. ಇದರ ಉತ್ತರವನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು ಕೊಡಲಿದ್ದಾರೆ ಎಂದು ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ, ಮಾಜಿ ಶಾಸಕ ಸುನೀಲ ಹೆಗಡೆ ತಿಳಿಸಿದರು.
ದಾಂಡೇಲಿಯಲ್ಲಿ ನಡೆಸಿದ ಕಾರ್ಯಕರ್ತರ ಸಭೆ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿಂದೆ ಬೇರೆ ಬೇರೆ ಸಂದರ್ಭ ಅಲ್ಪಸಂಖ್ಯಾತ ಮುಖಂಡರಾದ ಬಾಳೆಕುಂದ್ರಿ ಹಾಗೂ ಅಲ್ಬರ್ಟ್‌ರವರು ಜಿಪಂ ಅಧ್ಯಕ್ಷರಾಗಬಹುದಿತ್ತು. ಅವರಿಬ್ಬರಿಗೂ ವಂಚಿಸಿದ ದೇಶಪಾಂಡೆ ತಮ್ಮ ಹಿಂಬಾಲಕರಿಗೆ ಜಿಪಂ ಅಧ್ಯಕ್ಷ ಪಟ್ಟ ನೀಡಿ ಅಲ್ಪ ಸಂಖ್ಯಾತರಿಗೆ ಮೋಸ ಮಾಡಿದ್ದಾರೆ. ಮತ್ತೆ ಎಲ್ಲಿಯೂ ಹಿಂದುಳಿದವರು, ದಲಿತರಿಗೆ ಅವಕಾಶ ನೀಡದೇ ವಂಚಿಸಿದ್ದಾರೆ ಎಂದರು.
ದೇಶಪಂಡೆಯವರಿಗೆ ಹಿಂದುಳಿದ ವರ್ಗದವರ ಮೇಲೆ ಪ್ರೀತಿಯಿದ್ದರೆ ಈ ಬಾರಿ ಭೀಮಣ್ಣ ನಾಯ್ಕರನ್ನು ಅಭ್ಯರ್ಥಿಯನ್ನಾಗಿ ಮಾಡಬಹುದಿತ್ತು. ಆದರೆ, ಅವರು ಪುತ್ರ ವ್ಯಾಮೋಹದಿಂದ ತಮ್ಮ ಮಗನಿಗೆ ಟಿಕೆಟ್ ಕೊಡಿಸಿದರು. ಮತ್ತೆ ಸಂಸದ ಅನಂತಕುಮಾರ ಹೆಗಡೆಯವರೇ ಒಪ್ಪಿಕೊಂಡ ಹಾಗೆ ಕಳೆದ ಮೂರು ಅವಧಿಯ ಲೋಕಸಭಾ ಚುನಾವಣೆಯಲ್ಲಿ ಅನಂತ್‌ಕುಮಾರ ಹೆಗಡೆಗೆ ಬೆಂಬಲಿಸಿದ ದೇಶಪಾಂಡೆ ಮಾರ್ಗರೇಟ್ ಆಳ್ವಾರವರ ಸೋಲಿಗೆ ಕಾರಣರಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಗೆಲ್ಲಿಸುವ ಇವರು ಅಲ್ಪಸಂಖ್ಯಾತರಿಗೆ ಮೋಸ ಮಾಡಿದಂತೆಯೇ ಅಲ್ಲವೆ? ಎಂದು ಪ್ರಶ್ನಿಸಿದರು.
ಶಿವಾನಂದ ನಾಯ್ಕರು ಪ್ರಬಲ ಹಿಂದುಳಿದ ವರ್ಗಗಳ ನಾಯಕರಾಗಿದ್ದು, ಅವರಲ್ಲಿ ನಮ್ಮ ಪಕ್ಷದ ಜಾತ್ಯಾತೀತತೆ, ಸಾಮಾಜಿಕ ನ್ಯಾಯದ ಬದ್ದತೆಯಿದೆ. ಅವರನ್ನು ಗೆಲ್ಲಿಸುವುದಕ್ಕಾಗಿಯೇ ಮತದಾರರು ಸಿದ್ಧರಾಗಿದ್ದಾರೆ. ಈ ಜಿಲ್ಲೆಯಲ್ಲಿ ಕಾಂಗ್ರೆಸ್ ಬಿಜೆಪಿ ಲೋಕಸಭಾ ಸದಸ್ಯರಾಗಿ ಹೋಗಿದ್ದಾರೆ. ಜಿಲ್ಲೆ ಅಭಿವೃದ್ದಿಯಿಂದ ಹಿಂದುಳಿಯಲು, ಹಿಂದುಳಿದವರೆಲ್ಲರೂ ಹಿಂದುಳಿಯಲು ಈವರೆಗೆ ಆಳಿದವರೇ ಕಾರಣರಾಗಿದ್ದಾರೆ. ಒಂದು ಅವಕಾಶ ಜೆಡಿಎಸ್‌ಗೆ ನೀಡಿದರೆ ಜಿಲ್ಲೆಯ ಅಭಿವೃದ್ದಿ ಜೊತೆಗೆ ಹಿಂದುಳಿದವರ ಚಿತ್ರಣ ಬದಲಾಯಿಸಿ ತೋರಿಸುತ್ತೇವೆ ಎಂದರು. ಪ್ರಶಾಂತ ದೇಶಪಾಂಡೆ ಕಾಂಗ್ರೆಸ್‌ನ ಸರ್ವಸಮ್ಮತ ಅಭ್ಯರ್ಥಿಯಲ್ಲ. ಆರ್.ವಿ. ದೇಶಪಾಂಡೆ ಮತ್ತು ಅವರ ಬೆಂಬಲಿಗರ ಅಭ್ಯರ್ಥಿ. ಮಾವ ಪ್ರಫುಲ್ಲ ಪಟೇಲರ ಕೋರಿಕೆ ಅಭ್ಯರ್ಥಿಯಾಗಿದ್ದಾರೆ. ಪ್ರಶಾಂತ್‌ಗೆ ರಾಜಕೀಯವಾಗಿ ಇನ್ನೂ ಅನುಭವ ಕಮ್ಮಿ. ಅಪ್ಪನ ಹೆಸರು ಹೇಳಿಕೊಂಡೇ ಚುನಾವಣೆ ಎದುರಿಸಬೇಕು ಎಂದರು.
ಜೆಡಿಎಸ್ ಅಧ್ಯಕ್ಷ ಟಿ.ಆರ್. ಚಂದ್ರಶೇಖರ ಮಾತನಾಡಿ, ಶಿವಾನಂದ ನಾಯ್ಕ ಜನಸಾಮಾನ್ಯರೊಳಗಿರುವ ನಾಯಕ. ಆದರೆ, ಪ್ರಶಾಂತ ದೇಶಪಾಂಡೆ, ಅನಂತ ಕುಮಾರ ಹೆಗಡೆ ಜನರಿಂದ ದೂರವಿರುವ ರಾಜಕಾರಣಿಗಳು. ಪ್ರಶಾಂತಗೆ ಅಪ್ಪನ ಪ್ರಭಾವವೇ ಮಾನದಂಡವಾದರೆ ಅನಂತಕುಮಾರಗೆ ಮೋದಿಯ ಪ್ರಭಾವವೇ ಮಾನದಂಡ. ಆದರೆ, ಶಿವಾನಂದ ನಾಯ್ಕರಿಗೆ ಅನುಭವ ಮತ್ತು ಸಾಮರ್ಥ್ಯವೇ ಮಾನದಂಡವಾಗಿದೆ. ಹಾಗಾಗಿ ಜೆಡಿಎಸ್‌ಗೊಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು.
ಜೋಯಿಡಾ ಆಧ್ಯಕ್ಷ ತುಕಾರಾಮ ಮಾಂಜರೇಕರ, ನಗರಸಭೆ ಮಾಜಿ ಅಧ್ಯಕ್ಷ ಕೆ.ಎಸ್. ಪಾಟೀಲ, ನಗರಸಭೆ ಪ್ರತಿಪಕ್ಷ ನಾಯಕ ರಿಯಾಜ ಶೇಖ, ನಗರಸಭಾ ಸದಸ್ಯ ಮುಸ್ತಾಕ ಶೇಖ, ನಗರಸಭಾ ಸದಸ್ಯರಾದ ರೋಷನ್ ಬವಾಜಿ, ಲಿಯಾಖತ್ತ ಅಲಿ ಖಾನಾಪುರಿ, ಜೆಡಿಎಸ್ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಕಾಳಿದಾಸ ನಾಯ್ಡು, ಮುಖಂಡರಾದ ಶಶಿ ಓಶಿಮಠ, ಪ್ರವೀಣ ಜನ್ನು, ಗುರು ಮಠಪತಿ, ಶಂಕರ ಮುಂಗರವಾಡಿ, ಅಲಿಂ ಶೇಖ, ರಫಿಕ್, ನಾರಾಯಣ ನಾಯಕ ಮುಂತಾದವರಿದ್ದರು.