ಇಂದು ಕಾಂಗ್ರೆಸ್ ಚುನಾವಣೆ ಕಚೇರಿ ಉದ್ಘಾಟನೆ, ಸಮಾವೇಶಕ್ಕೆ ಆಸ್ಕರ್
ಮಂಗಳೂರು: ಲೋಕಸಭೆ ಚುನಾವಣೆಗೆ ಸಂಬಂಧಿಸಿ ಕಾಂಗ್ರೆಸ್ನ ಚುನಾವಣೆ ಕಚೇರಿಯನ್ನು ಮಾ.24ರಂದು ಬೆಳಗ್ಗೆ 9.30ಕ್ಕೆ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಉದ್ಘಾಟಿಸಲಿದ್ದಾರೆ. ಆ ಬಳಿಕ 11ಕ್ಕೆ ಪುರಭವನದಲ್ಲಿ ನಡೆಯುವ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವದಲ್ಲಿ ಭಾಗವಹಿಸುವರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಆದ್ದರಿಂದ ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲವು ನಿಶ್ಚಿತ. ರಾಜ್ಯದಲ್ಲಿ 20ಕ್ಕಿಂತ ಅಧಿಕ ಸ್ಥಾನ ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಿದರು. ನಿಡ್ಡೋಡಿ ಯೋಜನೆಯನ್ನು ಕೇಂದ್ರ ಈಗಾಗಲೇ ಕೈಬಿಟ್ಟಿದೆ. ಎತ್ತಿನಹೊಳೆ ಯೋಜನೆಗೆ ಜಿಲ್ಲೆಯ ಶಾಸಕರು, ಸಚಿವರ ವಿರೋಧವಿದೆ. ಬೆಂಗಳೂರಿನ ಜನಪ್ರತಿನಿಧಿಗಳು ಯೋಜನೆ ಪರ ಮಾತನಾಡುತ್ತಾರೆ. ಯೋಜನೆ ಬಗ್ಗೆ ಜಿಲ್ಲೆಯವರ ನಿಲವು ಸ್ಪಷ್ಟವಿದೆ ಎಂದರು.
26ರಂದು ಪೂಜಾರಿ ನಾಮಪತ್ರ
ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ಮಾ.26ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಪ್ರಸಕ್ತ ಎಲ್ಲ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ ಎಂದು ಹೇಳಿದರು. ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮುಖಂಡರಾದ ಐವನ್ ಡಿಸೋಜ, ಕಳ್ಳಿಗೆ ತಾರನಾಥ ಶೆಟ್ಟಿ, ಸುಧೀರ್ ಕೆ.ಟಿ, ಮಹಾನಗರ ಪಾಲಿಕೆ ಮೇಯರ್ ಮಹಾಬಲ ಮಾರ್ಲ ವೇದಿಕೆಯಲ್ಲಿದ್ದರು.