ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸಂಜೆ 6ರೊಳಗೆ ಬಂದ್ರೆ ಮತದಾನ ಅವಕಾಶ

Srinivasa Murthy VN
Updated On : 24 Mar 2014, 10:56 am

ಮಂಗಳೂರು: ಏ.17ರಂದು ನಡೆಯುವ ಚುನಾವಣೆಯಲ್ಲಿ ಸಂಜೆ 6ಕ್ಕೆ ಮೊದಲು ಮತಗಟ್ಟೆಗೆ ಆಗಮಿಸುವ ಎಲ್ಲರಿಗೂ ಮತದಾನಕ್ಕೆ ಅವಕಾಶ ನೀಡುವಂತೆ ಜಿಲ್ಲಾ ಚುನಾವಣಾಧಿಕಾರಿ ಎ.ಬಿ.ಇಬ್ರಾಹಿಂ ಮತಗಟ್ಟೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಭಾನುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಯಾರೊಬ್ಬರೂ ಮತದಾನದಿಂದ ವಂಚಿತರಾಗಬಾರದು. ಆದ್ದರಿಂದ ಈ ಬಾರಿ ನೇಮಕವಾಗುವ ಪೊಲೀಸ್, ಹೋಮ್‌ಗಾರ್ಡ್, ಮತಗಟ್ಟೆ ಸಿಬ್ಬಂದಿ ಸೇರಿದಂತೆ ಇತರೆ ಅಧಿಕಾರಿಗಳಿಗೆ ತಮ್ಮ ಮತದಾನ ಹಕ್ಕು ಚಲಾಯಿಸಲು ಅನುಕೂಲ ಕಲ್ಪಿಸಲಾಗಿದೆ. ಅದೇ ರೀತಿ ಬೇರೆ ಜಿಲ್ಲೆಗಳಿಂದ ವರ್ಗಾವಣೆಗೊಂಡು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಇಲಾಖೆ ಅಧಿಕಾರಿಗಳು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಿದ್ದಲ್ಲಿ ಅಂಚೆ ಮತದಾನಕ್ಕೂ ಅವಕಾಶವಿದೆ ಎಂದರು.
ಮತಗಟ್ಟೆ ಅಧಿಕಾರಿಗಳು ಮತದಾನದ ಮುನ್ನಾ ದಿನ (ಮಸ್ಟರಿಂಗ್)ವಿದ್ಯುನ್ಮಾನ ಮತಯಂತ್ರ, ಕಂಟ್ರೋಲಿಂಗ್ ಯೂನಿಟ್‌ಗಳನ್ನು ಪಡೆಯುವಾಗ ಅವು ಸುಸ್ಥಿತಿಯಲ್ಲಿ ಇರುವುದನ್ನು ಖಾತರಿಪಡಿಸಿಕೊಂಡು ತೆಗೆದುಕೊಳ್ಳಬೇಕು. ಮತದಾನ ದಿನ ಬೆಳಗ್ಗೆ 7ಕ್ಕೆ ಮತಗಟ್ಟೆ ಅಧಿಕಾರಿಗಳು ಮತಗಟ್ಟೆಯಲ್ಲಿ ಕುಳಿತುಕೊಳ್ಳುವ ವಿವಿಧ ಪಕ್ಷಗಳ ಅಭ್ಯರ್ಥಿಗಳ ಪೋಲಿಂಗ್ ಏಜೆಂಟರಿಗೆ ಮತದಾನ ಯಂತ್ರದಲ್ಲಿ ಯಾವುದೇ ಮತ ಚಲಾವಣೆಯಾಗಿಲ್ಲ ಎಂಬುದನ್ನು ಖಾತರಿಪಡಿಸಬೇಕು. ನಂತರವೇ ಮತದಾನಕ್ಕೆ ಅವಕಾಶ ಕಲ್ಪಿಸಬೇಕು. ಜಿಲ್ಲಾ ಹಾಗೂ ರಾಜ್ಯ ಗಡಿ ಭಾಗಗಳ ಮತಗಟ್ಟೆ ಅಧಿಕಾರಿಗಳು ಅತ್ಯಂತ ವಿವೇಚನೆಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕೆಂದರು.
ಮತಿಭ್ರಮಣೆಯವರಿಗೆ ಅವಕಾಶವಿಲ್ಲ: ಮತದಾನ ಕೇಂದ್ರದಿಂದ ನೂರು ಮೀಟರ್ ಸುತ್ತಳತೆಯಲ್ಲಿ ಯಾವುದೇ ವಾಹನ ಓಡಾಟಕ್ಕೆ ಅವಕಾಶವಿಲ್ಲ. ಮತಿಭ್ರಮಣೆ ಹೊಂದಿದವರ ಹೆಸರು ಮತದಾರರ ಪಟ್ಟಿಯಲ್ಲಿದ್ದರೂ ಅಂಥವರಿಗೆ ಅಥವಾ ಅವರೊಂದಿಗೆ ಬರುವವರಿಗೆ ಮತದಾನಕ್ಕೆ ಅವಕಾಶವಿಲ್ಲ. ಅಶಕ್ತರು, ಅಂಧರಿಗೆ ಒಬ್ಬರು ಸಹಾಯಕರೊಂದಿಗೆ ಮತಗಟ್ಟೆಗೆ ತೆರಳಿ ಮತ ಚಲಾಯಿಸಲು ಅವಕಾಶ ಕಲ್ಪಿಸಬಹುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದರು.
ಮತಗಟ್ಟೆ ಸುತ್ತಮುತ್ತ ಅನುಸರಿಸಬೇಕಾದ ನಿಯಮ ಕುರಿತು ತರಬೇತಿ ಅಧಿಕಾರಿ ನಾಗೇಂದ್ರ ಅಧಿಕಾರಿಗಳಿಗೆ ವಿವರ ನೀಡಿದರು.

ಮತಗಟ್ಟೆಲಿ ಪ್ರಚಾರ ಮಾಡಿದ್ರೆ ಮತದಾನವಿಲ್ಲ
ಯಾರೇ ವ್ಯಕ್ತಿ ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಆತನು ಇನ್ನೂ 18 ವರ್ಷದವನಂತೆ ಕಾಣದಿದ್ದರೆ ಆತನಿಗೆ ಮತದಾನಕ್ಕೆ ಅವಕಾಶ ಕಲ್ಪಿಸಬೇಕು. ಮತದಾರರ ಪಟ್ಟಿಯಲ್ಲಿದ್ದು ಮತಗಟ್ಟೆಗೆ ಮತ ಚಲಾಯಿಸಲು ಬಂದ ವ್ಯಕ್ತಿ ಪಕ್ಷದ ಪರವಾಗಿ ಪ್ರಚಾರ ಆರಂಭಿಸಿದರೆ ಅಂಥವರಿಗೆ ಮತದಾನಕ್ಕೆ ಅವಕಾಶ ನೀಡದೇ ವಾಪಸ್ ಕಳುಹಿಸುವಂತೆ ಮತಗಟ್ಟೆ ಅಧಿಕಾರಿಗಳಿಗೆ ಜಿಲ್ಲಾ ಚುನಾವಣಾಧಿಕಾರಿ ಎ.ಬಿ.ಇಬ್ರಾಹಿಂ ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement