ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ನಿಧನಕ್ಕೆ ಡಾ. ಹೆಗ್ಗಡೆ ಸಂತಾಪ
ಬೆಳ್ತಂಗಡಿ: ಖ್ಯಾತ ಯಕ್ಷಗಾನ ಕಲಾವಿದ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ನಿಧನಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ತೀವ್ರ ಸಂತಾಪ ಸೂಚಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಯಕ್ಷಗಾನ ಕೇಂದ್ರದ ಪ್ರಾರಂಭ ವರ್ಷದ ವಿದ್ಯಾರ್ಥಿಯಾಗಿದ್ದ ಚೆನ್ನಪ್ಪ ಶೆಟ್ಟಿ, ಮುಂದೆ ಕ್ಷೇತ್ರದ ಯಕ್ಷಗಾನ ಮಂಡಳಿಯಲ್ಲಿ ಗೆಜ್ಜೆ ಕಟ್ಟಿ ಕೆಲವು ವೇಷಗಳಿಂದ ಜನಮನ್ನಣೆ ಪಡೆದಿದ್ದರು. ತಮ್ಮದೇ ಶೈಲಿಯ ನೃತ್ಯ ಮತ್ತು ಶುದ್ಧ ಭಾಷೆ ಮತ್ತು ಉಚ್ಛಾರ, ನಿರ್ವಹಿಸುವ ಪಾತ್ರದಲ್ಲಿ ಸ್ಪಷ್ಟ ಧೋರಣೆಯಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಯಕ್ಷಗಾನ ಕುಟುಂಬದಲ್ಲಿ ಇಂತಹ ಹಿರಿಯ ಸದಸ್ಯನನ್ನು ನಾವು ಕಳೆದುಕೊಂಡಂತಾಗಿದೆ ಎಂದು ಡಾ. ಹೆಗ್ಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಣ್ಯರ ಸಂತಾಪ: ಚೆನ್ನಪ್ಪ ಶೆಟ್ಟಿ ನಿಧನಕ್ಕೆ ಸಚಿವ ಬಿ. ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲು, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ವಿಟ್ಲದ ಯಕ್ಷ ಮಿತ್ರರು, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಬಿ.ಡಿ.ಎ. ಆಯುಕ್ತ ಟಿ. ಶ್ಯಾಮ್ ಭಟ್, ಡಾ.ಎಂ. ಪ್ರಭಾಕರ ಜೋಶಿ, ಜೆ.ಕೆ. ಭಟ್ ಸೇರಾಜೆ, ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಪ್ರತಾಪಸಿಂಹ ನಾಯಕ್, ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಜಿಲ್ಲಾ ಉಪಾಧ್ಯಕ್ಷ ಬಿ. ದೇವದಾಸ್ ಶೆಟ್ಟಿ, ಮಾಜಿ ಶಾಸಕ ರುಕ್ಮಯ್ಯ ಪೂಜಾರಿ ಮತ್ತಿತರರು ಸಂತಾಪ ಸೂಚಿಸಿದ್ದಾರೆ.
ಇಂದು ಶ್ರದ್ಧಾಂಜಲಿ ಸಭೆ: ಮಂಗಳೂರಿನ ಮಲ್ಲಿಕಟ್ಟೆ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಸೋಮವಾರ ಶ್ರದ್ಧಾಂಜಲಿ ಸಭೆ ನಡೆಯಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.