ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನಾಯಕ ಹತ್ಯೆ: ಬನ್ನಂಜೆ ರಾಜಾಗೆ ರು. 8 ಕೋಟಿ ಸುಪಾರಿ!

Srinivasa Murthy VN
Updated On : 25 Mar 2014, 10:57 am

ಅಂಕೋಲಾ: ಉದ್ಯಮಿ ಆರ್.ಎನ್. ನಾಯಕ ಹತ್ಯೆ ನಡೆದ 8ನೇ ದಿನವೇ ಪಾತಕಿ ಬನ್ನಂಜೆ ರಾಜಾಗೆ ರು. 8 ಕೋಟಿ ಸಂದಾಯವಾಗಿದೆ ಎಂಬ ಸಂಗತಿಯನ್ನು ಪ್ರಕರಣದ ಪ್ರಮುಖ ಆರೋಪಿ ಜಗದೀಶ ಚಂದ್ರ ರಾಜವಂಶಿ ಪೊಲೀಸ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.
ನಾಯಕ ಹತ್ಯೆಯ ಮಾರನೇ ದಿನ ಭೂಗತ ಪಾತಕಿ ಬನ್ನಂಜೆ ರಾಜ್ ಖಾಸಗಿ ವಾಹಿನಿಯೊಂದಕ್ಕೆ ಕರೆ ಮಾಡಿ, 'ಹತ್ಯೆ ಮಾಡಿಸಿದ್ದು ನಾನೇ' ಎಂದು ತಿಳಿಸಿದ್ದ. ವಾರದ ಹಿಂದೆ ಬೆಂಗಳೂರಿನ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾದ ಜಗದೀಶ ಚಂದ್ರ ರಾಜವಂಶಿ ತನ್ನ ಖಾತೆಯ ಮೂಲಕ ಬನ್ನಂಜೆ ರಾಜಾನ ನಕಲಿ ಬ್ಯಾಂಕ್ ಖಾತೆಗೆ ರು. 8 ಕೋಟಿ ಜಮೆ ಮಾಡಿರುವ ಬಗ್ಗೆ ಪೊಲೀಸರಿಗೆ ಸ್ಪಷ್ಟ ಸಾಕ್ಷ್ಯಾಧಾರ ಸಿಕ್ಕಿದೆ. ನಾಯಕ್ ಹತ್ಯೆಯ ದಿನವೇ ಐಜಿಪಿ ಪ್ರತಾಪ ರೆಡ್ಡಿ ಜಗದೀಶನ ಬಗ್ಗೆ ಪೂರ್ಣ ಮಾಹಿತಿ ಕಲೆ ಹಾಕಿದ್ದರು. ಆದರೂ ಬಂಧಿಸದೆ, ಆತನ ಚಲನವಲನ, ವ್ಯವಹಾರ, ಆತನ ಬ್ಯಾಂಕ್ ಖಾತೆ ಮೇಲೆ ತೀವ್ರ ನಿಗಾ ಇಟ್ಟಿದ್ದರು. ಈಗ ಜಗದೀಶ ಸರಿಯಾಗಿ ಬಲೆಗೆ ಬಿದ್ದಿದ್ದಾನೆ.
ಜಗದೀಶ್‌ನಿಂದ ಬನ್ನಂಜೆ ರಾಜಾನಿಗೆ ಸಂದಾಯವಾದ ಹಣ ನಾಯಕ್ ಹತ್ಯೆಗೆ ಸುಪಾರಿ ನೀಡಿದ್ದೇ ಅಥವಾ ನಾಯಕ್ ಹತ್ಯೆ ಬಳಿಕ ಬನ್ನಂಜೆ ರಾಜಾನಿಂದ ಬೆದರಿಕೆಗೆ ಒಳಗಾದವರು ಕೊಟ್ಟಿದ್ದೇ ಎಂಬುದು ಇನ್ನೂ ಖಚಿತಗೊಂಡಿಲ್ಲ.
ಬಲಗೈ ಬಂಟ..?: ಸೆರೆಯಾದ ಜಗದೀಶ ಬನ್ನಂಜೆ ರಾಜಾನ ಬಲಗೈ ಬಂಟನಂತಿದ್ದ ಎನ್ನಲಾಗುತ್ತಿದ್ದು, ಕಪ್ಪು ಹಣ ಈತನ ಮೂಲಕವೇ ರವಾನೆಯಾಗುತ್ತಿತ್ತು. ಈಗ ಜಗದೀಶಚಂದ್ರ ಸೆರೆಯಾಗಿದ್ದು, ಬನ್ನಂಜೆ ರಾಜಾ ದುರ್ಬಲನಾಗಿದ್ದಾನೆ ಎನ್ನುವುದು ಪೊಲೀಸರ ತರ್ಕ. ಗಿಟಾರ್ ವಾದಕ, ರಿಯಲ್ ಎಸ್ಟೇಟ್ ಉದ್ಯಮಿಯೂ ಆಗಿರುವ ಜಗದೀಶಚಂದ್ರ ರಾಜ್ಯದ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದ.
 ಈತನ ಮನೆಯಲ್ಲಿ ಮುಖ್ಯಮಂತ್ರಿ, ಗೃಹಸಚಿವ, ಇತರ ಸಚಿವರೊಂದಿಗೆ ಇದ್ದ ಫೋಟೋಗಳೂ ಪತ್ತೆಯಾಗಿವೆ. ಕಾರುಗಳ ಶೋಕಿಯಿದ್ದ ಜಗದೀಶ್ ಪದೇ ಪದೇ ಕಾರುಗಳನ್ನು ಬದಲಿಸುತ್ತಿದ್ದ. ಕಳೆದ ಸೋಮವಾರ ತಡರಾತ್ರಿ ಯುವತಿಯೊಬ್ಬಳನ್ನು ತನ್ನ ಶೆವರ್‌ಲೆಟ್ ಕಾರಿನಲ್ಲಿ ಕರೆದೊಯ್ಯುತ್ತಿದ್ದಾಗ ಬೆಂಗಳೂರು ನಗರದ ಹೊರವಲಯದಲ್ಲಿ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement