ಭರವಸೆ ಈಡೇರಿಸಿದ 'ಕೈ' ಸರ್ಕಾರ: ಸೊರಕೆ
ಉಪ್ಪಿನಂಗಡಿ: ಕಾಂಗ್ರೆಸ್ ರಾಜ್ಯ ಸರ್ಕಾರ ಚುನಾವಣೆಗೆ ಮುನ್ನ ಘೋಷಿಸಿದ್ದ 165 ಭರವಸೆಗಳ ಪೈಕಿ 95ಕ್ಕಿಂತಲೂ ಹೆಚ್ಚು ಭರವಸೆಗಳನ್ನು ಅತ್ಯಲ್ಪ ಅವಧಿಯಲ್ಲಿ ಕಾರ್ಯಗತಗೊಳಿಸಿದೆ ಎಂದು ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ತಿಳಿಸಿದರು.
ನೆಲ್ಯಾಡಿಯಲ್ಲಿರುವ ಎಪಿಎಂಸಿ ನಿರ್ದೇಶಕ ಯಶೋಧರ ಅವರ ನಿವಾಸದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಚುನಾವಣಾ ಪೂರ್ವ ಸಮಾಲೋಚನಾ ಸಭೆಯಲ್ಲಿ ಸೊರಕೆ ಮಾತನಾಡಿದರು.
1.15 ಲಕ್ಷ ಬಡ ಬಿಪಿಎಲ್ ಕುಟುಂಬಗಳಿಗೆ 1 ರುಪಾಯಿಯಲ್ಲಿ ಅಕ್ಕಿ, ಉಚಿತ ಆರೋಗ್ಯ ತಪಾಸಣೆ ಮೊದಲಾದ ಹತ್ತು ಹಲವು ಜನಪರ ಕಾಳಜಿಯುಳ್ಳ ಯೋಜನೆಗಳೊಂದಿಗೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಕಾರ್ಯಕರ್ತರು ನಮ್ಮ ಸರ್ಕಾರ ಮಾಡಿದ ಈ ಎಲ್ಲ ಒಳ್ಳೆಯ ಕೆಲಸಗಳ ಬಗ್ಗೆ ಮತದಾರರಿಗೆ ತಿಳಿಯಪಡಿಸುವ ಕೆಲಸ ಮಾಡಿ ಈ ಕ್ಷೇತ್ರದಲ್ಲಿ ಹಿರಿಯ ನಾಯಕ ಜನಾರ್ದನ ಪೂಜಾರಿಯವರನ್ನು ಅತ್ಯಂತ ಹೆಚ್ಚು ಬಹುಮತದಿಂದ ಗೆಲ್ಲಿಸಲು ಕಾರ್ಯಪ್ರವೃತ್ತರಾಗಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ಎ.ಸಿ. ಜಯರಾಜ್ ಮಾತನಾಡಿದರು.
ವೇದಿಕೆಯಲ್ಲಿ ಮಂಗಳೂರಿನ ಕಾರ್ಪೋರೇಟರ್ ವಿನಯರಾಜ್, ಕಡಬ ಬ್ಲಾಕ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಗಿರೀಶ್, ಕಾಂಗ್ರೆಸ್ ಮುಂದಾಳು ಡಾ. ರಘು, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಪಿ. ವರ್ಗೀಸ್, ಕಡಬ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ನ್ಯಾಯವಾದಿ ಇಸ್ಮಾಯಿಲ್ ಇದ್ದರು.
ಹಿರಿಯ ಕಾಂಗ್ರೆಸ್ ಮುಖಂಡರಾದ ಕೆ.ಪಿ. ಥೋಮಸ್. ತಾಪಂ ಸದಸ್ಯೆ ಉಷಾ ಅಂಚನ್, ಸರ್ವೋತ್ತಮ ಗೌಡ, ಗಂಗಾಧರ ಶೆಟ್ಟಿ ಹೊಸಮನೆ ಮತ್ತು ನೂರಾರು ಕಾರ್ಯಕರ್ತರು ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡರು. ಕಾಂಗ್ರೆಸ್ ಮುಖಂಡ ಸರ್ವೋತ್ತಮ ಗೌಡ ಸ್ವಾಗತಿಸಿ, ಗಂಗಾಧರ ಶೆಟ್ಟಿ ಹೊಸಮನೆ ಧನ್ಯವಾದ ಸಮರ್ಪಿಸಿದರು.