ಮುತಾಲಿಕ್ ವಜಾ ಸರಿಯಾದ ಕ್ರಮ: ರಾಮ ಭಟ್
ಪುತ್ತೂರು: ಶ್ರೀ ರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ರ ಬಿಜೆಪಿ ಸೇರ್ಪಡೆಯನ್ನು ರದ್ದು ಮಾಡಿರುವ ಕೇಂದ್ರದ ಬಿಜೆಪಿ ನಾಯಕರ ಕ್ರಮ ಸಂಪೂರ್ಣವಾಗಿ ಸರಿಯಾಗಿದೆ. ಇಂತಹ ಕೆಟ್ಟ ಭಾಷಣಕಾರ ಬಿಜೆಪಿ ಪಕ್ಷಕ್ಕೆ ಅಗತ್ಯವಿಲ್ಲ ಎಂದು ಮಾಜಿ ಶಾಸಕ, ಹಿರಿಯ ರಾಜಕಾರಣಿ ಕೆ. ರಾಮ್ ಭಟ್ ಅಭಿಪ್ರಾಯಪಟ್ಟರು.
ಮುತಾಲಿಕ್ ಸೇರ್ಪಡೆ ರದ್ದುಗೊಳಿಸಿದ ಕುರಿತು ಮಾತನಾಡಿದ ಅವರು, ಬಿಜೆಪಿ ಮುತಾಲಿಕ್ ವಿಚಾರದಲ್ಲಿ ತೆಗೆದುಕೊಂಡ ಕ್ರಮ ಸಮರ್ಪಕವಾಗಿದೆ. ಮುತಾಲಿಕ್ ಅತ್ಯಂತ ಕೆಟ್ಟ ಭಾಷಣಕಾರ. ಇವರನ್ನು ಬಿಜೆಪಿಗೆ ಸೇರಿಸಿಕೊಂಡರೆ ಇದರಿಂದ ಬಿಜೆಪಿಗೆ ಖಂಡಿತ ಹಿನ್ನಡೆಯಾಗುತ್ತದೆ ಎಂದರು.
ಧಾರ್ಮಿಕ ದ್ವೇಷಕ್ಕೆ ಕಾರಣವಾಗುವಂತೆ ಭಾಷಣ ಮಾಡುವ ಇವರಿಂದ ಬಿಜೆಪಿಯ ನೈತಿಕ ಶಕ್ತಿಗೆ ಪೆಟ್ಟು ಬೀಳುತ್ತದೆ. ಕೈ ಕಡಿಯಿರಿ, ತಲೆ ಕಡಿಯಿರಿ ಎಂದು ಬೊಬ್ಬಿಡುವ ಮುತಾಲಿಕ್ರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡದ್ದೇ ತಪ್ಪು. ರಾಜ್ಯ ಬಿಜೆಪಿ ನಾಯಕರ ಆತುರದ ನಿರ್ಧಾರ ಇದಾಗಿದೆಎಂದು ರಾಮ್ಭಟ್ ಹೇಳಿದರು.
ಮೋದಿ ಮೂಲಿಕಾ ಔಷಧ: ಮೋದಿ ಅನೇಕ ಸಂಗತಿಗಳಿಗೆ 'ಮೂಲಿಕಾ ಔಷಧ' ಎಂದ ರಾಮಭಟ್, ರಾಜ್ಯದ ಭ್ರಷ್ಟಾಚಾರ ಹಾಗೂ ಇನ್ನಿತರ ಅನ್ಯಾಯಗಳನ್ನು ತಡೆದು ಕರ್ನಾಟಕವನ್ನು ಸರಿ ಮಾಡಲಿದ್ದಾರೆ. ರಾಜ್ಯದ ಬಿಜೆಪಿ ನಾಯಕರಿಗೆ ಮೋದಿ ಮೂಗುದಾರ ಹಾಕುತ್ತಾರೆ ಎಂಬ ನಂಬಿಕೆ ನನಗಿದೆ. ರಾಜ್ಯದ ಕೆಲವೊಂದು ವಿಚಾರಗಳು ತನಗೆ ಹಿತವಿಲ್ಲದಿದ್ದರೂ ಮೋದಿಗಾಗಿ ಎಲ್ಲವನ್ನೂ ಒಪ್ಪಿಕೊಳ್ಳುತ್ತೇನೆ ಎಂದು ತಿಳಿಸಿದರು.
ಬಿಜೆಪಿ ಹಿರಿಯ ನಾಯಕ ಜಸ್ವಂತ್ಸಿಂಗ್ ನಿಲುವು ಸರಿಯಲ್ಲ. ಪಕ್ಷವು ಅವರಿಗೆ ಸಾಕಷ್ಟು ಬಾರಿ ಅವಕಾಶ ನೀಡಿದೆ. ಪಕ್ಷದ ಶಿಸ್ತು ಮತ್ತು ತೀರ್ಮಾನವನ್ನು ಎಲ್ಲರೂ ಒಪ್ಪಿಕೊಳ್ಳಬೇಕು, ಜಸ್ವಂತ್ ಸಿಂಗ್ ಈ ನಿಲುವಿನಿಂದ ಹೊರತಲ್ಲ ಎಂದರು.