ಹೊನ್ನಾವರದಲ್ಲಿ ಮತದಾನ ಜಾಗೃತಿ ಅಭಿಯಾನ
ಹೊನ್ನಾವರ: ಜಿಲ್ಲಾ ಉಪನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆ, ಉತ್ತರ ಕನ್ನಡ ಜಿಲ್ಲೆ ಇವರ ಆದೇಶದ ಮೇರೆಗೆ ಹೊನ್ನಾವರದ ಎಂಪಿಇ ಸೊಸೈಟಿಯ ಎಸ್ಡಿಎಂ ಪದವಿಪೂರ್ವ ಕಾಲೇಜಿನಲ್ಲಿ ಮತದಾನದ ಬಗ್ಗೆ ಸ್ವೀಪ್ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನಗರದ ರಸ್ತೆಯಲ್ಲಿ ರ್ಯಾಲಿಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಎಸ್ಡಿಎಂ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಂ.ಎಚ್. ಭಟ್ಟ ಪ್ರತಿಜ್ಞಾ ವಿಧಿ ಬೋಧಿಸಿ, ಪ್ರಾಸ್ತಾವಿಕ ಮಾತನಾಡಿದರು. ಕವಲಕ್ಕಿಯ ಎಸ್.ಎಸ್. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಜಿ. ಭಟ್ಟ ಮಾತನಾಡಿ, ದೇಶದ ಭವಿಷ್ಯದ ಜವಾಬ್ದಾರಿಯನ್ನು ನಿರ್ವಹಿಸಲು ಯೋಗ್ಯ ವ್ಯಕ್ತಿಯನ್ನು ಆಯ್ಕೆಮಾಡುವುದು ಹಾಗೂ ಕಡ್ಡಾಯ ಮತದಾನದ ಮಹತ್ವವನ್ನು ವಿವರಿಸಿದರು.ಹೊನ್ನಾವರ ತಾಲೂಕಿನ ವಿವಿಧ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.