ಕ್ರಿಮಿನಲ್ ಕೇಸ್ ಇಲ್ಲದಿದ್ದರೂ ಆರೋಪ ಹಾಸ್ಯಾಸ್ಪದ: ಜೋಶಿ
ಕಾರವಾರ: ಪ್ರಶಾಂತ ದೇಶಪಾಂಡೆ ಅವರ ತಂದೆ ಸಚಿವ ಆರ್.ವಿ. ದೇಶಪಾಂಡೆ ವಿರುದ್ಧ ಡಿನೋಟಿಫಿಕೇಶನ್ ಮಾಡಿದ ಕ್ರಿಮಿನಲ್ ಕೇಸು ದಾಖಲಾಗಿದೆ. ಆದರೆ ಒಂದೇ ಒಂದು ಕ್ರಿಮಿನಲ್ ಕೇಸು ಇಲ್ಲದಿದ್ದರೂ ಬಿಜೆಪಿ ಅಭ್ಯರ್ಥಿ ಅನಂತ ಕುಮಾರ ಹೆಗಡೆ ಅವರನ್ನು ಪ್ರಶಾಂತ 'ಕ್ರಿಮಿನಲ್ ಬೇಬಿ' ಎಂದು ಕರೆದಿರುವುದು ಹಾಸ್ಯಾಸ್ಪದ ಎಂದು ಜಿಲ್ಲಾ ಬಿಜೆಪಿ ವಕ್ತಾರ ನಾಗರಾಜ ಜೋಶಿ ಹೇಳಿದ್ದಾರೆ. ಮಂಗಳವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಇದುವರೆಗೂ ತಿರುಗಾಡದ ಕುಗ್ರಾಮಗಳಲ್ಲಿ ಅನಂತ ಕುಮಾರ್ ಬೆಳಕು ಮೂಡಿಸಿದ್ದಾರೆ. ಬಳಕೂರಿನ ಮತ್ಸ್ಯಗ್ರಾಮ, ಮೆಟ್ನಗದ್ದೆ ಸೇರಿದಂತೆ ಜೋಯಿಡಾ ತಾಲೂಕಿನ ಅನೇಕ ಹಳ್ಳಿಗಳ ಜನ ರಾತ್ರಿ ವೇಳೆ ಬೆಳಕು ಕಾಣುತ್ತಿದ್ದಾರೆ ಎಂದರೆ ಅದು ಅನಂತ ಕುಮಾರ ಕೊಡುಗೆ. ತಮ್ಮ ಅಧಿಕಾರವಧಿಯಲ್ಲಿ ಜಿಲ್ಲೆಯನ್ನು ಇಷ್ಟರ ಮಟ್ಟಿಗೆ ಅಭಿವೃದ್ಧಿಪಡಿಸಿದ ಮತ್ತೊಬ್ಬ ಸಂಸದನಿಲ್ಲ ಎಂದರು. ಆರ್.ವಿ.ದೇಶಪಾಂಡೆ ವಿರುದ್ಧ ಡಿನೋಟಿಫಿಕೇಶನ್ ಮಾಡಿದ ಕ್ರಿಮಿನಲ್ ಕೇಸು ದಾಖಲಾಗಿದೆ. ಹೀಗಾಗಿ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದರು. ಪಕ್ಷದ ಪ್ರಮುಖರಾದ ಪ್ರಸಾದ ಕಾರವಾರಕರ, ಮಾಜಿ ಶಾಸಕ ಗಂಗಾಧರ್ ಭಟ್ ಸೇರಿದಂತೆ ಹಲವರು ಇದ್ದರು.