ಜನಸಾಮಾನ್ಯರ ಆಶೀರ್ವಾದವೇ ಶ್ರೀರಕ್ಷೆ
ಕನ್ನಡಪ್ರಭ ವಾರ್ತೆ, ಶಿರಸಿ, ಮಾ. 25
ದೇಶಪಾಂಡೆ ಸಾಕಷ್ಟು ಹಣ ಮಾಡಿಕೊಂಡಿದ್ದಾರೆ. ಚುನಾವಣೆಯಲ್ಲಿ ಹಣವನ್ನು ನೀರಿನಂತೆ ಖರ್ಚು ಮಾಡುವ ಅಗತ್ಯ ನನಗಿಲ್ಲ. ನಾನು ಜನಸಾಮಾನ್ಯರ ನಡುವಿನಿಂದ ಬಂದವನು. ಜನಸಾಮಾನ್ಯರ ಆಶೀರ್ವಾದವೇ ನಮಗೆ ಶ್ರೀರಕ್ಷೆ ಎಂದು ಜೆಡಿಎಸ್ ಲೋಕಸಭಾ ಅಭ್ಯರ್ಥಿ ಶಿವಾನಂದ ನಾಯ್ಕ ಹೇಳಿದರು. ನಗರದ ಟೆಂಪೋ ನಿಲ್ದಾಣದ ಬಳಿ ಜೆಡಿಎಸ್ ಚುನಾವಣಾ ಕಚೇರಿ ಉದ್ಘಾಟಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ದೇಶಪಾಂಡೆ ಮಗ ಪ್ರಶಾಂತ ದೇಶಪಾಂಡೆ ಹೊರಗಿನಿಂದ ಬಂದವರು. ಅವರು ಚಿನ್ನದ ಚಮಚವನ್ನು ಬಾಯಲ್ಲಿಟ್ಟುಕೊಂಡು ಬಂದವರು. ಅವರಿಗೆ ಜನಸಾಮಾನ್ಯರ ಸಮಸ್ಯೆ ಅರ್ಥವಾಗಲು ಸಾಧ್ಯವೇ ಇಲ್ಲ. ಪ್ರಶಾಂತಗೆ ದೇಶಪಾಂಡೆ ಬಲವೇ ಆಧಾರ ಎಂದು ಗುಡುಗಿದರು. ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ನಾಲ್ಕೈದು ಅವಧಿಯಲ್ಲಿ ಚುನಾವಣೆಗಳಲ್ಲಿ ಗೆಲ್ಲುತ್ತ ಬಂದಿದ್ದಾರೆ. ಆದರೆ ಅವರು ಜನಸಾಮಾನ್ಯರ ನಡುವಿನಿಂದ ಬಂದವರು. ಸಂಸದರಾಗಿ ಆಯ್ಕೆಯಾದ ನಂತರ ಜನಸಾಮಾನ್ಯರಿಗೆ ಅವರು ಸಿಗುತ್ತಿಲ್ಲ. ಕಾಣೆಯಾಗಿ ಹೋಗಿರುವ ಅವರ ಕಡೆಯೂ ಜನಸಾಮಾನ್ಯರು ಮುಖ ಮಾಡುವುದಿಲ್ಲ. ಆದರೆ ಜೆಡಿಎಸ್ ಹಾಗಲ್ಲ. ಜನಸಾಮಾನ್ಯರ ಪಕ್ಷ. ನಾನು ಜನಸಾಮಾನ್ಯರ ಕುಟುಂಬದಿಂದ ಬಂದವನು. ಶಾಸಕನಾಗಿ, ಜಿಲ್ಲಾ ಉಸ್ತುವಾರಿ ಸಚಿವನಾಗಿ, ಮಂತ್ರಿಯಾಗಿ ಅನುಭವ ಇರುವವನು. ಜನಸಾಮಾನ್ಯರಿಗೆ ಸಾಕಷ್ಟು ಸಹಾಯ ಮಾಡಿದ್ದೇನೆ. ಎಲ್ಲೂ ಹೆಸರನ್ನು ಕೆಡಿಸಿಕೊಂಡಿಲ್ಲ. ಹಿಂದುಳಿದವರು, ಅಲ್ಪಸಂಖ್ಯಾತರು ನನ್ನ ಪರವಿದ್ದಾರೆ. ನಾನು ಈ ಸಾರಿ ಚುನಾವಣೆಯಲ್ಲಿ ಗೆಲ್ಲುವುದು ನಿಶ್ಚಿತ ಎಂದರು.ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಆರ್. ನಾಯ್ಕ ಮಾತನಾಡಿದರು. ಧುರೀಣರಾದ ಶಶಿಭೂಷಣ ಹೆಗಡೆ, ಮಾಜಿ ಶಾಸಕ ಪ್ರೇಮಾನಂದ ಜೈವಂತ, ಆನಂದ ಗೌಡ, ಮುಜೀಬ್, ಆರ್.ಎಂ. ಹೆಗಡೆ ಹಲ್ಲುಸರಿಗೆ ಇದ್ದರು.
ಕೈಗಾರಿಕಾ ಮಂತ್ರಿಯಾಗಿದ್ದ ದೇಶಪಾಂಡೆ ಜಿಲ್ಲೆಗೆ ಹಲವಾರು ಜನಸ್ನೇಹಿ ಹಾಗೂ ಪರಿಸರ ಸ್ನೇಹಿ ಕೈಗಾರಿಕೆಗಳನ್ನು ತರಬಹುದಿತ್ತು. ಆದರೆ ಅವರ ಅವಧಿಯಲ್ಲಿ ಜಿಲ್ಲೆಯ ಕೈಗಾರಿಕೆಗಳೆಲ್ಲ ಮುಚ್ಚಲ್ಪಟ್ಟವು. ಜಿಲ್ಲೆಗಾಗಿ ಅವರು ಏನನ್ನೂ ಮಾಡಿಲ್ಲ. ಸಂಸದ ಅನಂತಕುಮಾರ ಹೆಗಡೆ ಜಿಲ್ಲೆಯ ಅಭಿವೃದ್ಧಿಗಾಗಿ ಕೇಂದ್ರದಿಂದ ಒಳ್ಳೆಯ ಯೋಜನೆಗಳನ್ನು ರೂಪಿಸಬಹುದಿತ್ತು. ಆದರೆ ಅವರೂ ಆ ಕೆಲಸಗಳನ್ನು ಸರಿಯಾಗಿ ಮಾಡಿಲ್ಲ.
- ಶಿವಾನಂದ ನಾಯ್ಕ