ಕಾಂಗ್ರೆಸ್ ಕಾರ್ಯಕರ್ತರ ಸಭೆ: ಭುಗಿಲೆದ್ದ ಅಸಮಾಧಾನ
ಕಾರವಾರ: ಇಲ್ಲಿನ ಸದಾಶಿವಗಡದ ರೆಸಾರ್ಟ್ ಒಂದರಲ್ಲಿ ಬುಧವಾರ ನಡೆದ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಕ್ಷದಲ್ಲಿನ ವಿದ್ಯಮಾನಗಳ ಬಗ್ಗೆ ಕೆಲ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ. ಅದರಲ್ಲೂ ಭಟ್ಕಳದ ಮಾಜಿ ಶಾಸಕ ಜೆ.ಡಿ. ನಾಯ್ಕ ಎದ್ದು ನಿಂತು ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ವಿರುದ್ಧ ಕೆಲಸ ಮಾಡಿದ ಪಕ್ಷದ ಮುಖಂಡರಿಗೆ ಮಣೆ ಹಾಕಲಾಗುತ್ತಿದೆ. ಕೆಲ ಪದಾಧಿಕಾರಿಗಳನ್ನು ಬದಲಾಯಿಸುವಂತೆ ವಿನಂತಿಸಿದರೂ ಅದಕ್ಕೆ ಮಾನ್ಯತೆ ನೀಡಲಾಗಿಲ್ಲ. ಪಕ್ಷ ವಿರೋಧಿಗಳನ್ನು ಓಲೈಸುವುದರಿಂದ ನಿಷ್ಠಾವಂತರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಈ ರೀತಿ ಬೆಳವಣಿಗೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕುಮಟಾದ ಕೆಲ ಮುಖಂಡರೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇದೆಲ್ಲವನ್ನು ಕೇಳಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಎಲ್ಲವನ್ನೂ ಬಗೆಹರಿಸಲಾಗುವುದು. ಈಗ ಚುನಾವಣೆ ಸಂದರ್ಭ. ಪಕ್ಷದಲ್ಲಿ ಒಗ್ಗಟ್ಟಿನಿಂದ ಮುಂದುವರಿಯಬೇಕು ಎಂದು ಸಮಾಧಾನ ಪಡಿಸಿದರು ಎಂದು ತಿಳಿದುಬಂದಿದೆ. ಆದರೂ ಕೆಲ ಕಾಂಗ್ರೆಸ್ ಮುಖಂಡರ ಕೋಪ ಶಮನವಾಗಲಿಲ್ಲ. ಕೆಲವರು ಕುಳಿತಲ್ಲಿಯೆ ಗೊಣಗುತ್ತಿದ್ದುದು ಕೇಳಿಬಂತು.
ದೇಶಪಾಂಡೆ ಆಮಿಷಕ್ಕೆ ಬಲಿಯಾಗಬೇಡಿ: ಅನಂತಕುಮಾರ ಹೆಗಡೆ
ಹೊನ್ನಾವರ: ಲೋಕಸಭಾ ಚುನಾವಣೆಯಲ್ಲಿ ತಮ್ಮ ಮುದ್ದಿನ ಮಗನ ಗೆಲುವಿಗಾಗಿ ದೇಶಪಾಂಡೆ ಕಂಪನಿ ಒಡ್ಡುವ ಯಾವುದೇ ಆಮಿಷಕ್ಕೆ ಮತದಾರ ಮರುಳಾಗದೆ ಜವಾಬ್ದಾರಿಯಿಂದ ಹಗರಣ ಮುಕ್ತ ದೇಶಕ್ಕಾಗಿ ಮತಚಲಾಯಿಸುವಂತೆ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಹೇಳಿದರು. ತಾಲೂಕಿನ ಹಳದೀಪುರದ ಚಿಪ್ಪಿಹಕ್ಕಲ ಗ್ರಾಮದಲ್ಲಿನ ಜಟ್ಟಿ ಪಟಗಾರ ಮನೆಯಲ್ಲಿ ಕಡತೋಕಾ, ಹಳದೀಪುರ ನವಿಲಗೋಣ, ಕರ್ಕಿ ಗ್ರಾಮದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸೂರಜ್ ನಾಯ್ಕ ಸೋನಿ, ವಿನೋದ ನಾಯ್ಕ, ಗೀತಾ ಎಸ್. ಹೆಗಡೆ, ಪರಮೇಶ್ವರ ನಾಯ್ಕ, ಡಿ.ಎನ್.ನಾಯ್ಕ ತೊಪ್ಪಲಕೇರಿ, ಶಂಕರ ದೇವರು ಭಟ್ಟ, ರವಿ ನಾಯ್ಕ, ನಾಗೇಶ ಆಚಾರ್ಯ ನವಿಲಗೋಣ ಇದ್ದರು.
ಉ.ಕ. ಲೋಕಸಭಾ ಕ್ಷೇತ್ರ: 10 ನಾಮಪತ್ರ ಸಲ್ಲಿಕೆ
ಕಾರವಾರ: ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾದ ಬುಧವಾರದ ವರೆಗೆ ಉಕ ಕ್ಷೇತ್ರಕ್ಕೆ ಒಟ್ಟು 10 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. 9 ಅಭ್ಯರ್ಥಿಗಳು ಪಕ್ಷೀಯವಾಗಿ ಹಾಗೂ ಇಬ್ಬರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಮಾ. 27, 28ರಂದು ನಾಮಪತ್ರವನ್ನು ಚುನಾವಣಾ ಆಯೋಗ ಪರಿಶೀಲನೆ ನಡೆಸಲಿದ್ದು, ಮಾ. 29 ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕಡೆಯ ದಿನವಾಗಿದೆ.