ನಾಯಕ ಹತ್ಯೆ ಪ್ರಕರಣ ನೆನೆಗುದಿಗೆ
ಅಂಕೋಲಾ: ಉದ್ಯಮಿ ಆರ್.ಎನ್. ನಾಯಕರ ಹತ್ಯೆಯಾಗಿ 3 ತಿಂಗಳು ಗತಿಸಿದರೂ ಸುಪಾರಿ ನೀಡಿದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ನಾಯಕ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಲು ಸಗಡಗೇರಿಯ ಜಿಲ್ಲಾ ಗ್ರಾಮೀಣ ಯುವ ಹೋರಾಟ ಸಮಿತಿಯ ಅಧ್ಯಕ್ಷ ದೇವರಾಯ ಜಿ. ನಾಯಕ ಒತ್ತಾಯಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಯಕ ಹತ್ಯೆ ನಡೆದು 3 ತಿಂಗಳು ಕಳೆದರೂ, ಇನ್ನೂ ಪೊಲೀಸ್ ಇಲಾಖೆ ಚುರುಕು ಪಡೆದುಕೊಂಡಂತೆ ಕಾಣುತ್ತಿಲ್ಲ. ಹಾಗೆ ರಾಜ್ಯದಲ್ಲಿ ಆಡಳಿತ ನಡೆಸುವ ಕಾಂಗ್ರೆಸ್ ಆರ್.ಎನ್. ನಾಯಕರ ಹತ್ಯೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳದೆ ಇರುವುದು ನಾನಾ ಸಂಶಯಕ್ಕೆ ಕಾರಣವಾಗಿದೆ. ಹಾಡುಹಗಲೇ ಆರ್.ಎನ್. ನಾಯಕರ ಹತ್ಯೆ ಆಗಿರುವುದರಿಂದ ಸರ್ಕಾರವು ಮುಜುಗರ ಪಡುವಂತೆ ಆಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆಯವರು ಆರ್.ಎನ್. ನಾಯಕರ ಅವರ ಮನೆಗೆ ಹೋಗಿ ಬಂದದ್ದು ಬಿಟ್ಟರೆ ಅವರು ಯಾವ ತನಿಖೆಗೂ ಒತ್ತಾಯಿಸದಿರುವುದು ಮತ್ತು ತಮ್ಮ ಸರ್ಕಾರದ ಮೇಲೆ ಒತ್ತಡ ಹೇರದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.
ಪ್ರತಿಭಟನೆ ಎಚ್ಚರಿಕೆ: ಸಚಿವ ಆರ್.ವಿ. ದೇಶಪಾಂಡೆಯವರು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಗಮನಹರಿಸದಿದ್ದರೂ, ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಲ್ಲ. ಆದರೆ, ತಮ್ಮ ಪುತ್ರ ಪ್ರಶಾಂತ ದೇಶಪಾಂಡೆಯವರಿಗೆ ಕಾಂಗ್ರೆಸ್ ಟಿಕೆಟ್ ತರುವಲ್ಲಿ ಕಾಳಜಿ ವಹಿಸಿದಷ್ಟನ್ನು ಜಿಲ್ಲೆಯ ಅಭಿವೃದ್ಧಿ ಮತ್ತು ಆರ್.ಎನ್. ನಾಯಕರ ಹತ್ಯೆ ಪ್ರಕರಣದ ಬಗ್ಗೆ ವಹಿಸಿದ್ದರೆ ಜಿಲ್ಲೆಯ ಜನತೆ ಅವರನ್ನು ಶ್ಲಾಘಿಸಬಹುದಿತ್ತು. ಕೇವಲ ಸ್ವಾರ್ಥ ಸಾಧನೆಗಾಗಿ ಅಧಿಕಾರ ಖಂಡನೀಯ ಎಂದು ಟೀಕಿಸಿದರು. ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸದಿದ್ದರೆ, ರಾಷ್ಟ್ರೀಯ ಹೆದ್ದಾರಿ ತಡೆದು ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಇದರಿಂದಾಗುವ ಅನಾಹುತಗಳಿಗೆ ಸರ್ಕಾರ ಹಾಗೂ ಪೊಲೀಸ್ ಇಲಾಖೆಯೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು. ಹೋರಾಟ ಸಮಿತಿ ಉಪಾಧ್ಯಕ್ಷ ಮಂಜುನಾಥ ದೀಕ್ಷಿತ, ಕಾರ್ಯದರ್ಶಿ ರಾಘು ಗೌಡ, ಸಹ ಕಾರ್ಯದರ್ಶಿ ರಾಮಚಂದ್ರ ಎಂ. ನಾಯ್ಕ ತದಡಿ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಎಂ. ನಾಯಕ ಭಾವಿಕೇರಿ, ಸದಸ್ಯ ಈಶ್ವರ ಗೌಡ ಸುದ್ದಿಗೋಷ್ಠಿಯಲ್ಲಿದ್ದರು.