ಮತದಾನ ಮಾಡಲು ಉದಾಸೀನ ಬೇಡ
ಕನ್ನಡಪ್ರಭ ವಾರ್ತೆ, ಅಂಕೋಲಾ, ಮಾ. 26
ನನ್ನ ಒಂದು ಮತದಿಂದ ಏನಾಗುವುದಿದೆ ಎಂಬ ಉದಾಸೀನ ಭಾವನೆಯೇ ಚುನಾವಣೆಯಲ್ಲಿ ಮತದಾನ ಪ್ರಮಾಣ ಕಡಿಮೆಯಾಗಲು ಕಾರಣ. ಒಂದು ಮತದಿಂದ ಒಬ್ಬ ಸ್ಪರ್ಧಾಳು ಸೋತು, ಗೆದ್ದ ಉದಾಹರಣೆಗಳಿವೆ. ಒಂದು ಮತದಿಂದ ಸಂಸತ್ತಿನಲ್ಲಿ ಮಸೂದೆಗಳೂ ಗೆದ್ದಿವೆ, ಸೋತಿವೆ. ಪ್ರಜಾಪ್ರಭುತ್ವದಲ್ಲಿ ಪ್ರತಿ ಮತವೂ ಅಮೂಲ್ಯವಾದದ್ದು, ತಪ್ಪದೇ ಚಲಾಯಿಸಿ ಎಂದು ಪಿ.ಎಂ. ಕಾಲೇಜಿನ ಉಪನ್ಯಾಸಕರಾದ ಉಲ್ಲಾಸ ಹುದ್ದಾರ ಕರೆ ನೀಡಿದರು. ಸ್ಥಳೀಯ ಜಿ.ಸಿ. ಕಾಲೇಜಿನ ಎನ್ಎಸ್ಎಸ್ ಘಟಕ ಹಾಗೂ ಪ.ಪೂ. ಶಿಕ್ಷಣ ಇಲಾಖೆಯ ನಿರ್ದೇಶನದ ಮೂಲಕ ಹಮ್ಮಿಕೊಂಡ ಮತದಾನ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.
ಪ್ರೋತ್ಸಾಹಿಸಿ: ಸಾಹಿತ್ಯ ಪರಿಷತ್ನ ತಾಲೂಕಾಧ್ಯಕ್ಷ ಗೋಪಾಲಕೃಷ್ಣ ನಾಯಕ ಮಾತನಾಡಿ, ಯುವ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಸರ್ಕಾರದ ಈ ಕಾರ್ಯಕ್ರಮ ಶ್ಲಾಘನೀಯ ಎಂದರು. ಡಾ. ಎಸ್.ಆರ್. ಶಿರೋಡಕರ ಮಾತನಾಡಿ, ವಿದ್ಯಾರ್ಥಿಗಳೇ ನಿಮ್ಮ ಪಾಲಕರಲ್ಲಿ-ನೆರೆಹೊರೆಯವರಲ್ಲಿ ಮತದಾನದ ಅರಿವು ಮೂಡಿಸಿ ಮತ ಹಾಕಲು ಪ್ರೋತ್ಸಾಹಿಸುವ ಮೂಲಕ ಕರ್ತವ್ಯ ನಿರ್ವಹಿಸಿ ಎಂದರು. ಕ.ವಿ.ವಿ ರಾ.ಸೇ.ಯೋ. ಸಂಯೋಜಕರಾದ ಡಾ. ಡಿ.ಬಿ. ಹಾಜನಗೋಳ ಜಾಗೃತಿ ಜಾಥಕ್ಕೆ ಚಾಲನೆ ನೀಡಿದರು. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಪ್ರೊ. ಬಿ.ಆರ್. ರಾಜು ಸ್ವಾಗತಿಸಿದರು.
ಕಡ್ಡಾಯ ಮತದಾನ ಮಾಡಲು ಸಾರ್ವಜನಿಕರಲ್ಲಿ ಜಾಗೃತಿ
ದಾಂಡೇಲಿ: ದಾಂಡೇಲಿಯಲ್ಲಿ ಪದವಿ ಪೂರ್ವ ಮಹಾವಿದ್ಯಾಲಯಗಳ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಬರುವ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತ ಚಲಾಯಿಸಬೇಕೆಂದು ಸರ್ಕಾರದ ಸ್ವೀಪ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಘೋಷಣೆಗಳನ್ನು ಕೂಗುತ್ತ ಜನರಲ್ಲಿ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂಶುಪಾಲರಾದ ಎಂ.ಎಸ್. ಲಮಾಣಿ ಹಾಗೂ ಯು.ಎಸ್. ಪಾಟೀಲ ವಿಧಾನಸಭಾ ಚುನಾವಣೆಯಲ್ಲಿ ಶೇ. 80ರಷ್ಟು ಆಗುವ ಮತದಾನ ಸಂಸದ ಚುನಾವಣೆಯಲ್ಲಿ ಕೇವಲ ಶೇ. 60ರ ಗಡಿ ದಾಟುವುದಿಲ್ಲ. ಈ ಬಾರಿ ಚುನಾವಣೆ ಆಯೋಗ ಪ್ರತಿಯೊಬ್ಬ ಮತದಾರ ಚುನಾವಣೆಯಲ್ಲಿ ತನ್ನ ಮತದಾನ ಹಕ್ಕನ್ನು ಬಳಸಿಕೊಂಡು ಕಡ್ಡಾಯವಾಗಿ ಮತ ಚಲಾಯಿಸಿ ಶೇ. 100ರಷ್ಟು ಮತದಾನ ಆಗುವಂತೆ ಜನರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದರು. ಕನ್ಯಾ ವಿದ್ಯಾಲಯದ ಪ್ರಾಂಶುಪಾಲ ಲತಾ ಯು. ಪಾಟೀಲ, ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಎಂ.ಎಂ. ಖತೀಬ್ ಮತ್ತು ಬೋಧಕ-ಬೋಧಕೇತರ ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉಪೇಂದ್ರ ಘೋರ್ಪಡೆ ನಿರೂಪಿಸಿದರು.