ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮತದಾರರ ಪಟ್ಟಿ: ಡಾಟಾ ನೋಂದಣಿಗೆ ಅವಸರ

Srinivasa Murthy VN
Updated On : 27 Mar 2014, 10:53 am

-ಆತ್ಮಭೂಷಣ್
ಮಂಗಳೂರು: ಮತದಾರರ ಪಟ್ಟಿಗೆ ಮತದಾರರ ಸೇರ್ಪಡೆ, ಡಾಟಾ ನೋಂದಣಿ ಗೊಂದಲದ ಗೂಡಾಗಿದೆ.
 ರಾಜ್ಯ ಚುನಾವಣಾ ಆಯೋಗ ಹೇಳುವುದೊಂದು, ಜಿಲ್ಲಾ ಚುನಾವಣೆ ಕಚೇರಿಗಳಿಗೆ ಕಳುಹಿಸುವ ಸೂಚನೆ ಇನ್ನೊಂದು. ಇದರಿಂದ ಜಿಲ್ಲೆಯಲ್ಲಿ ಚುನಾವಣೆ ಕಾರ್ಯನಿರ್ವಹಿಸುವ ಸಿಬ್ಬಂದಿ, ಅಧಿಕಾರಿಗಳು ಕಂಗೆಟ್ಟು ಹೋಗುವಂತಾಗಿದೆ.
 ಈ ಬಾರಿ ಮತ ಚಲಾಯಿಸಬೇಕಾದರೆ ಮತದಾರರ ಪಟ್ಟಿ ಸೇರ್ಪಡೆಗೆ ಆಯೋಗ ಮಾ.9ರಿಂದ 16ರ ವರೆಗೆ ವಿಶೇಷ ಅಭಿಯಾನ ನಡೆಸಿತ್ತು. ಅರ್ಜಿ ಸ್ವೀಕಾರಕ್ಕೆ ಮಾ.16 ಕೊನೆದಿನ ವಿಧಿಸಿದ ಆಯೋಗ, ಮತದಾರರ ಅರ್ಜಿಗಳ ಡಾಟಾ ನೋಂದಣಿಗೆ ಅಂದೇ ಗಡುವು ವಿಧಿಸಿತ್ತು. ನಂತರ ಜಿಲ್ಲಾ ಚುನಾವಣೆ ಶಾಖೆಗಳ ಕೋರಿಕೆ ಮೇರೆಗೆ 3 ದಿನ(ಮಾ.19) ಅವಧಿ ವಿಸ್ತರಿಸಿತ್ತು. ವಾಸ್ತವದಲ್ಲಿ ಈಗ ಇರುವ ಸಿಬ್ಬಂದಿ ಬಳಸಿ ಮತಪಟ್ಟಿ ಸೇರ್ಪಡೆಗೆ ಸಲ್ಲಿಸಿದ ಅರ್ಜಿ ಪರಿಶೀಲಿಸಿ ಅಂತಿಮಗೊಳಿಸಲು ಒಂದು ವಾರ ಕಾಲಾವಕಾಶ ಬೇಕು. ಪ್ರತಿ ಬಾರಿ ಚುನಾವಣೆ ವೇಳೆ ಒಂದು ವಾರ ಕಾಲಾವಕಾಶ ನೀಡುತ್ತಿದ್ದ ಆಯೋಗ ಈ ಬಾರಿ ಮೂರೇ ದಿನ ಕೊಟ್ಟಿದೆ. ಆಯೋಗದ ಈ ತರಾತುರಿ ಕ್ರಮದಿಂದ ಡಾಟಾ ನೋಂದಣಿಯನ್ನು ಬುಧವಾರವೇ ಕೊನೆಗೊಳಿಸಲಾಗಿದೆ.
ಎಲ್ಲ ಅರ್ಜಿ ಸೇರ್ಪಡೆಯಾಗುತ್ತಾ?: ಈವರೆಗೆ ರಾಜ್ಯದಲ್ಲಿ ಒಟ್ಟು 79,831 ಆನ್‌ಲೈನ್ ಅರ್ಜಿ ಬಂದಿದ್ದು, ಒಟ್ಟು 13,89,831 ಅರ್ಜಿ ಮತದಾರರ ಪಟ್ಟಿ ಸೇರ್ಪಡೆಗೆ ಸಲ್ಲಿಕೆಯಾಗಿದೆ. ಮಾ.16ರಂದು ಒಂದೇ ದಿನ 2.50 ಲಕ್ಷ ಅರ್ಜಿ ಬಂದಿದೆ. ಈ ಎಲ್ಲ ಅರ್ಜಿಗಳನ್ನು 10 ದಿನದಲ್ಲಿ ಪರಿಶೀಲಿಸಿ 26ರಂದು ಅಂತಿಮಗೊಳಿಸುವುದಾಗಿ ರಾಜ್ಯ ಮುಖ್ಯ ಚುನಾವಣೆ ಆಯುಕ್ತ ಅನಿಲ್ ಕುಮಾರ್ ಝಾ ಬೆಂಗಳೂರಲ್ಲಿ ಹೇಳಿದ್ದರು. ಡಾಟಾ ನೋಂದಣಿಗೆ ಸೀಮಿತ ಅವಧಿ ನಿಗದಿಪಡಿಸಿರುವುದರಿಂದ ಎಲ್ಲ ಅರ್ಜಿ ಹೇಗೆ ಸೇರ್ಪಡೆಯಾಗುತ್ತದೆ ಎಂಬುದನ್ನು ಆಯೋಗವೇ ಸ್ಪಷ್ಟಪಡಿಸಬೇಕಷ್ಟೆ.  
ಅನರ್ಹರ ಸೇರ್ಪಡೆ ಸಾಧ್ಯತೆ: ಡಾಟಾ ನೋಂದಣಿಗೆ ಸಾಕಷ್ಟು ಕಾಲಾವಕಾಶ ನೀಡದ ಪರಿಣಾಮ ಮತದಾರರ ಪಟ್ಟಿಗೆ ಅರ್ಜಿ ನೀಡಿದವರನ್ನು ತರಾತುರಿಯಲ್ಲಿ ಸೇರ್ಪಡೆಗೊಳಿಸುವ ಕಾರ್ಯ ನಡೆಯುತ್ತಿದೆ. ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಅನುಸರಿಸಬೇಕಾದ ನಿಯಮ ಮೀರಿ ಸರಿಯಾಗಿ ಪರಿಶೀಲನೆ ನಡೆಸದೆ ಸೇರ್ಪಡೆಗೊಳಿಸಿದಲ್ಲಿ ಇದಕ್ಕೆ ಆಯೋಗವೇ ಹೊಣೆ ಹೊರಬೇಕಾಗಬಹುದು.
 'ಜಿಲ್ಲಾ ಕೇಂದ್ರಕ್ಕೆ ಆಯೋಗ ಕಳುಹಿಸಿ ಸೂಚನೆ ಪ್ರಕಾರ ಕೊನೆದಿನ ವರೆಗೆ ಸಲ್ಲಿಕೆಯಾದ ಎಲ್ಲ ಅರ್ಜಿಗಳನ್ನು ಡಾಟಾ ನೋಂದಣಿ ಮಾಡಲಾಗಿದೆ. ನಂತರ ಜೆರಾಕ್ಸ್ ಮಾಡಿಸಿ ಮೇಲಧಿಕಾರಿಯಿಂದ ರುಜು ಹಾಕಿಸಿ ಮತದಾರರ ಪಟ್ಟಿಗೆ ಸೇರಿಸಲಾಗುವುದು. ಅರ್ಜಿಗಳನ್ನು ಗ್ರಾಮ ಕರಣಿಕರು ಸರಿಯಾಗಿ ಪರಿಶೀಲಿಸಬೇಕು. ಆದರೆ ಅವರಿಗೆ ನೀಡಿದ ಸಮಯ ಸಾಲದು. ಆದ್ದರಿಂದ ಕೂಡಲೇ ಅರ್ಜಿಯನ್ನು ಮೇಲಿಂದ ಮೇಲೆ ಪರಿಶೀಲಿಸಿ ಕಳುಹಿಸುವಂತೆ ಸೂಚಿಸಲಾಗಿದೆ' ಎನ್ನುತ್ತಾರೆ ಚುನಾವಣಾ ಶಾಖೆ ಸಿಬ್ಬಂದಿ.
'ಜಿಲ್ಲೆಯಲ್ಲಿ 34,679 ಅರ್ಜಿ ಸ್ವೀಕರಿಸಲಾಗಿದ್ದು, 30,364 ಅರ್ಜಿ ಡಾಟಾ ನೋಂದಣಿ ಮಾಡಲಾಗಿದೆ. 4,115 ಅರ್ಜಿ ಬಾಕಿ ಉಳಿದಿದೆ. ಇದನ್ನು ಏನು ಮಾಡುವುದು ಎಂದು ಗೊತ್ತಿಲ್ಲ. ಮತದಾರರ ಪಟ್ಟಿಗೆ ಸೇರ್ಪಡೆಯಾಗದಿದ್ದರೆ ಇಷ್ಟು ಮಂದಿ ನಿಗದಿತ ಸಮಯದಲ್ಲಿ ಅರ್ಜಿ ಸಲ್ಲಿಸಿದರೂ ಮತದಾನದಿಂದ ವಂಚಿತರಾಗಲಿದ್ದಾರೆ' ಎನ್ನುತ್ತಾರೆ ಚುನಾವಣಾ ಸಿಬ್ಬಂದಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement