ಶಿರಸಿ-ಸಿದ್ದಾಪುರ ಕ್ಷೇತ್ರ: ಶೇ. 3 ಮತದಾರರ ಹೆಚ್ಚಳ
ಕನ್ನಡಪ್ರಭ ವಾರ್ತೆ, ಶಿರಸಿ, ಮಾ. 26
ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ. 3ರಷ್ಟು ಮತದಾರರ ಸಂಖ್ಯೆ ಹೆಚ್ಚಳವಾಗಿದೆ. 5405 ಮತದಾರರ ಹೆಸರು ಹೊಸದಾಗಿ ಸೇರ್ಪಡೆಗೊಂಡಿದೆ ಎಂದು ಸಹಾಯಕ ಚುನಾವಣಾಧಿಕಾರಿ ಕೆ. ರಾಜು ಮೊಗವೀರ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ವೇಳೆಗೆ 1.74 ಲಕ್ಷ ಮತದಾರರಿದ್ದು, ಈಗಿನ ಮತದಾರರ ಸಂಖ್ಯೆ 1.79 ಲಕ್ಷಕ್ಕೆ ಏರಿಕೆಯಾಗಿದೆ. 170 ಮತದಾರರ ಹೆಸರು ಕಡಿಮೆಯಾಗಿದೆ ಎಂದರು.
ಒಟ್ಟು 264 ಮತಗಟ್ಟೆ ಕೇಂದ್ರಗಳಿದ್ದು, 59 ಸೂಕ್ಷ್ಮ ಹಾಗೂ 33 ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಚುನಾವಣಾ ವೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅಂತಿಮವಾಗಿ ನಿರ್ಧರಿಸಲಾಗುವುದು. ಚುನಾವಣೆಗೆ ಸಂಬಂಧಿಸಿ 23 ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಪ್ರತಿ ಅಧಿಕಾರಿಗೆ 7ರಿಂದ ಗರಿಷ್ಠ 20 ಬೂತ್ ನೋಡಿಕೊಳ್ಳುವ ಜವಾಬ್ದಾರಿ ನೀಡಲಾಗಿದೆ. ನಾಲ್ಕು ಫ್ಲೈಯಿಂಗ್ ತನಿಖಾ ತಂಡ, ಮೂರು ಲೆಕ್ಕಪತ್ರ ಅಧಿಕಾರಿಗಳ ತಂಡ ನಿಯೋಜಿಸಲಾಗಿದೆ ಎಂದರು. ಚುನಾವಣಾ ಪ್ರಕ್ರಿಯೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳಿಗೆ ಇದೇ 30ರಂದು ಮೊದಲ ತರಬೇತಿಯನ್ನು ಶಿರಸಿಯ ಮಾರಿಕಾಂಬಾ ಕಾಲೇಜು ಹಾಗೂ ಸಿದ್ದಾಪುರದ ಎಂಜಿಸಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ಏ. 11ರಂದು ದ್ವಿತೀಯ ತರಬೇತಿ ನಡೆಯಲಿದೆ. ಕರ್ತವ್ಯಕ್ಕೆ ನೇಮಕಗೊಂಡಿರುವ ಅಧಿಕಾರಿಗಳಿಗೆ ಮತದಾನದ ಅವಕಾಶವಿದ್ದು, ಸಂಬಂಧಿಸಿದ ಅರ್ಜಿ ನಮೂನೆ ಭರ್ತಿ ಮಾಡಿ 29ರಂದು ತೆರೆಯುವ ವಿಶೇಷ ಕೌಂಟರ್ನಲ್ಲಿ ಸಲ್ಲಿಸಬಹುದು ಎಂದು ಹೇಳಿದರು.
ನಾಲ್ಕು ದೂರು: ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿರುವ ಕುರಿತು ನಾಲ್ಕು ದೂರುಗಳು ಬಂದಿವೆ. ಸಿದ್ದಾಪುರ ಪಟ್ಟಣ ಪಂಚಾಯ್ತಿ ಸದಸ್ಯರ ಗೆಲುವಿನ ಸಂದರ್ಭದಲ್ಲಿ ಪಟಾಕಿ ಸಿಡಿತ, ವಾಜಗಾರ ಸೊಸೈಟಿಯಲ್ಲಿ ರಾಜಕೀಯ ಪಕ್ಷದ ಸಭೆ ನಡೆಸಿರುವ ಬಗ್ಗೆ, ಆ್ಯಂಬ್ಯುಲೆನ್ಸ್ ಒಂದರಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬರ ಭಾವಚಿತ್ರ ಇರುವ ಕುರಿತು ಹಾಗೂ ಚಿಪಗಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ವಿಶೇಷ ಊಟ ಬಡಿಸಿದ ಬಗ್ಗೆ ದೂರುಗಳು ಬಂದಿವೆ. ಜಿಲ್ಲಾ ಚುನಾವಣಾಧಿಕಾರಿಗೆ ಈ ಕುರಿತು ಈಗಾಗಲೇ ವರದಿ ನೀಡಲಾಗಿದೆ ಎಂದರು. ಸಾರ್ವಜನಿಕರು ಯಾವುದೇ ದೂರು ಅಥವಾ ಮಾಹಿತಿ ನೀಡಲು 08384226382 ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದು ಎಂದು ರಾಜು ಮೊಗವೀರ ಹೇಳಿದರು. ಮದುವೆಯಂತಹ ಖಾಸಗಿ ಕಾರ್ಯಕ್ರಮಗಳ ಜವಳಿ ಖರೀದಿ ಅಥವಾ ಇನ್ನಿತರ ಕಾರಣಗಳಿಗೆ ದೊಡ್ಡ ಮೊತ್ತದ ನಗದು ಹಣ ಒಯ್ಯುವವರು ಸೂಕ್ತ ದಾಖಲೆಗಳೊಂದಿಗೆ ಮುಂಚಿತವಾಗಿ ಅನುಮತಿ ಪತ್ರ ಪಡೆದುಕೊಳ್ಳುವುದು ಉತ್ತಮ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.