ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಹಣಕಾಸಿನ ಅವ್ಯವಹಾರ ನಡೆದಿಲ್ಲ: ಪ್ರಭಾಕರ ರಾಣೆ

Srinivasa Murthy VN
Updated On : 28 Mar 2014, 11:03 am

ಕನ್ನಡಪ್ರಭ ವಾರ್ತೆ, ಕಾರವಾರ, ಮಾ. 27
ಬಾಪೂಜಿ ಗ್ರಾಮೀಣ ವಿಕಾಸ ಸಮಿತಿಯಲ್ಲಿ ಹಣಕಾಸಿನ ವ್ಯವಹಾರ ಸೇರಿದಂತೆ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ. ಆಡಳಿತಾಧಿಕಾರಿ ನೇಮಿಸುವ ಪ್ರಕ್ರಿಯೆಗೆ ಧಾರವಾಡ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ಆದೇಶವಾಗಿದೆ. ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಸಮಿತಿ ಬಗ್ಗೆ ಕೆಲವರು ಸುಳ್ಳು ಆಪಾದನೆ ಮಾಡುತ್ತಿದ್ದಾರೆ ಎಂದು ಬಾಪೂಜಿ ಗ್ರಾಮೀಣ ವಿಕಾಸ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಪ್ರಭಾಕರ ರಾಣೆ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾರವಾರ ಜೋಯಿಡಾ ತಾಲೂಕುಗಳ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ನೀಡುವ ಉದ್ದೇಶದಿಂದ 1985ರಲ್ಲಿ ಬಾಪೂಜಿ ಗ್ರಾಮೀಣ ವಿಕಾಸ ಸಮಿತಿಯನ್ನು ರಚಿಸಲಾಗಿದೆ. ಕಳೆದ ಮಾ. 25ರಂದು ಕೆಲವರು ನಮ್ಮ ಸಮಿತಿಯ ವಿರುದ್ಧ ವಿನಾಕಾರಣ ಆಪಾದನೆ ಮಾಡಿದ್ದಾರೆ. ಈ ಆಪಾದನೆಗಳಲ್ಲಿ ಯಾವುದೇ ಹುರುಳಿಲ್ಲ. ಹಿಂದೆ ಸಮಿತಿಯ ಸದಸ್ಯರಾಗಿ ಯಾವುದೇ ಅಭಿವೃದ್ಧಿ ಕೆಲಸಗಳಲ್ಲಿ ತೊಡಗದ ಕಾರಣ ಅವರನ್ನು ಸಮಿತಿಯ ಆಡಳಿತ ಮಂಡಳಿಯಿಂದ ಕೈ ಬಿಡಲಾಯಿತು. ಈ ಕಾರಣಕ್ಕಾಗಿ ಅವರು ಸಮಿತಿಯ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
ಪೂರ್ವಾಗ್ರಹ ಪೀಡಿತ ಮಾತು: ಕೇಂದ್ರ ಸರ್ಕಾರದ ಮಾರ್ಗಸೂಚಿಗೆ ಅನುಗುಣವಾಗಿ ಪ್ರತಿ ವರ್ಷ ಕ್ರಮಬದ್ಧವಾಗಿ ಸಮಿತಿಯ ಲೆಕ್ಕಾಚಾರ ನಡೆಸಲಾಗುತ್ತಿದೆ. ಲೆಕ್ಕಪತ್ರದ ಪ್ರಮಾಣ ಪತ್ರ ನೀಡಿದ ಬಳಿಕವೇ ಕೇಂದ್ರದಿಂದ ಅನುದಾನ ಬಿಡುಗಡೆಯಾಗುತ್ತಿದೆ. ಇನ್ನು ಕಿವುಡ ಮತ್ತು ಮೂಕ ಮಕ್ಕಳ ಶಾಲೆಗೆ ಸರ್ಕಾರ ಈಚೆಗೆ ವಾರ್ಷಿಕ ಅನುದಾನ ನೀಡುತ್ತಿದೆ. ಶಾಲೆಯನ್ನು ನಡೆಸಿಕೊಂಡು ಹೋಗಲು ಆರ್ಥಿಕ ಸಂಕಷ್ಟ ಎದುರಾದರೂ ಸಹ ನಾವು ಶಾಲೆ ಮುಚ್ಚದೇ ನಡೆಸಿಕೊಂಡು ಹೋಗುತ್ತಿದ್ದೇವೆ. ಅಲ್ಲದೇ ಬಾಪೂಜಿ ಗ್ರಾಮೀಣ ವಿಕಾಸ ಸಮಿತಿಯಲ್ಲಿ ನಮ್ಮ ಯಾವುದೇ ಸಂಬಂಧಿಕರಿಲ್ಲ ಎಂದರು. ಯುಜಿಸಿ ಸ್ಕೀಮ್‌ನಿಂದ ಹಾಗೂ ದಾನಿಗಳು ನೀಡಿದ ಹಣದಿಂದ ಪ್ರತ್ಯೇಕ ಹಾಸ್ಟೆಲ್ ಹಾಗೂ ನರ್ಸಿಂಗ್ ಸ್ಕೂಲ್ ಕಟ್ಟಡಗಳನ್ನು ನಿರ್ಮಿಸಲಾಗಿದೆ, ಇಲ್ಲಿ ಯಾವುದೇ ಹಣಕಾಸಿನ ಅವ್ಯವಹಾರ ಆಗಿಲ್ಲ. 2003ರಿಂದ ಆರಂಭವಾಗಿರುವ ಸದಾಶಿವಗಡದ ನರ್ಸಿಂಗ್ ಸ್ಕೂಲ್ ಸ್ವಂತ ಕಟ್ಟಡ ಹೊಂದಿದ್ದು, ಇದು ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಿಂದ ಪ್ರತ್ಯೇಕವಾಗಿದೆ. ಪ್ರತಿ ವರ್ಷ ಎಲ್ಲ ಸದಸ್ಯರ ಸಭೆ ಕರೆದು ವಾರ್ಷಿಕ ಲೆಕ್ಕಾಚಾರ ಮಾಡಿ ಅನುಮೋದನೆ ಪಡೆಯಲಾಗುತ್ತಿದೆ. ಸಮಿತಿಯ ಬಗೆಗೆ ಪೂರ್ವಾಗ್ರಹ ಪೀಡಿತರಾಗಿ ಅವರು ಆಪಾದನೆ ಮಾಡಿ ನಮ್ಮ ತೇಜೋವಧೆಗೆ ಪ್ರಯತ್ನ ಮಾಡಿದ್ದಾರೆ ಎಂದರು. ಬಾಪೂಜಿ ಗ್ರಾಮೀಣ ವಿಕಾಸ ಸಂಸ್ಥೆಯ ಸದಸ್ಯರಾದ ತಾನಾಜಿ ಫಳ, ಮಂಜುನಾಥ ಪವಾರ್, ಕಿಶೋರ್ ರಾಣೆ, ಉಲ್ಲಾಸ ನಾಯ್ಕ, ಪಾಂಡುರಂಗ ನಾಯ್ಕ, ಪ್ರಮೋದ್ ರಾಣೆ, ಮನೋಹರ್ ಗಾಂವಕರ, ಶ್ರೀಕಾಂತ ಸೈಲ್, ಪ್ರಭಾಕರ ಸಾಳುಂಕೆ, ಶ್ರೀಪಾದ ಸಾವಂತ ಇದ್ದರು.

ಬೀಳ್ಕೊಡುಗೆ ಸಮಾರಂಭ
ಕುಮಟಾ: ಗಿಬ್ ಬಾಲಕಿಯರ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭ ನಡೆಯಿತು. ಸಭೆ ಅಧ್ಯಕ್ಷತೆಯನ್ನು ಕೆನರಾ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಕಮಲಾ ಎಸ್. ರಾವ್ ವಹಿಸಿದ್ದರು. ಅತಿಥಿಗಳಾಗಿ ವಿನೋದ ಪ್ರಭು, ರಮಾನಂದ ನಾಯ್ಕ ಮಾತನಾಡಿದರು. ಪ್ರತೀಕ್ಷಾ ಪ್ರಭು ಪ್ರಾರ್ಥಿಸಿದರು. ಮುಖ್ಯಾಧ್ಯಾಪಕ ಎಂ. ರಮೇಶ ಉಪಾಧ್ಯಾಯ ಸ್ವಾಗತಿಸಿದರು. ಶಿಕ್ಷಕರಾದ ಗೀತಾ ಎಂ. ಪೈ, ಪಾಂಡುರಂಗ ಎಸ್. ವಾಗ್ರೇಕರ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿನಿಯರು ಅನಿಸಿಕೆ ಹಂಚಿಕೊಂಡರು. ಶಿಕ್ಷಕ ಸಂತೋಷ ಮಾವಿನಕಟ್ಟಾ ವಂದಿಸಿದರು. ಉದಯ ನಾಯ್ಕ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement