ಕಾರ್ಪ್ ಬ್ಯಾಂಕ್: 330,479 ಕೋಟಿ ಗುರಿ ಮೀರಿದ ಸಾಧನೆ
ಮಂಗಳೂರು: ಕಾರ್ಪೊರೇಷನ್ ಬ್ಯಾಂಕ್ 2013-14ನೇ ಸಾಲಿನ ಆರ್ಥಿಕ ವರ್ಷದಲ್ಲಿ ನಿಗದಿತ 300 ಕೋಟಿಗಿಂತ 330,479 ಕೋಟಿ ಗುರಿ ಮೀರಿದ ಸಾಧನೆ ಮಾಡಿದೆ. ಒಟ್ಟು ವಹಿವಾಟಿನಲ್ಲಿ 45,757 ಕೋಟಿ ಹೆಚ್ಚಳವಾಗಿದ್ದು, ಶೇ.16.07 ಪ್ರಗತಿ ದಾಖಲಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎಸ್.ಆರ್. ಬನ್ಸಾಲ್ ತಿಳಿಸಿದ್ದಾರೆ.
ಶುಕ್ರವಾರ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬ್ಯಾಂಕ್ 137,086 ಕೋಟಿ ಮುಂಗಡ ನೀಡಿದ್ದು, 193,393 ಕೋಟಿ ಠೇವಣಿ ಸಂಗ್ರಹಿಸಿದೆ. ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದಾಗ ಕಾರ್ಯಾಚರಣೆ ಲಾಭದಲ್ಲಿ ಶೇ.0.08 ಏರಿಕೆಯಾಗಿದೆ. ಹಿಂದೆ ಮೊದಲು 3,037 ಕೋಟಿ ಲಾಭವಿದ್ದರೆ ಮಾರ್ಚ್ ಅಂತ್ಯಕ್ಕೆ 3,038 ಕೋಟಿ ಲಾಭ ಗಳಿಸಿದೆ. ನಿವ್ವಳ ಲಾಭ ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿದ್ದು, 561.72 ಕೋಟಿ ಆಗಿದೆ. ಹಿಂದಿನ ಸಾಲಿನಲ್ಲಿ ಇದು 1,434.67 ಕೋಟಿ ಆಗಿತ್ತು ಎಂದರು.
ಶೇ.22.5 ಲಾಭಾಂಶ: ಬ್ಯಾಂಕ್ ಈ ವರ್ಷ ಶೇ.45 ಮಧ್ಯಂತರ ಲಾಭ ಪ್ರಕಟಿಸಿ, ಅಂತಿಮವಾಗಿ ಶೇ.22.5 ಲಾಭಾಂಶ ಘೋಷಿಸಿದೆ. ಒಟ್ಟು ಶೇ.67.5 ಲಾಭಾಂಶ ಪ್ರಕಟಿಸಿದಂತಾಗಿದೆ. ಅನುತ್ಪಾದಕ ಆಸ್ತಿಗೆ ಸಂಬಂಧಿಸಿ ಮೊತ್ತ ತೆಗೆದಿರಿಸಬೇಕಾದ್ದರಿಂದ ಈ ಸಲ ನಿವ್ವಳ ಲಾಭದಲ್ಲಿ ಕಡಿತವಾಗಿದೆ. ಆದ್ಯತಾ ವಲಯಕ್ಕೆ ಬ್ಯಾಂಕ್ ಶೇ.40.91ರಷ್ಟು ಮುಂಗಡ ನೀಡಿದೆ.