ಜನರಿಗೆ ಚುನಾವಣೆ ಫಲಿತಾಂಶದ ಜ್ವರವಾದರೆ,ಸ್ಟ್ರಾಂಗ್ ರೂಂ ಕಾಯುವವರಿಗೆ ಮಲೇರಿಯಾ!
- ಜಿತೇಂದ್ರ ಕುಂದೇಶ್ವರ
ಮಂಗಳೂರು: ಮೇ 16ರ ಚುನಾವಣೆ ಫಲಿತಾಂಶದ ಜ್ವರ ಜನರಲ್ಲಿ ವ್ಯಾಪಿಸುತ್ತಾ ಇರುವಂತೆ ಬೊಂದೆಲ್ ಮತಯಂತ್ರಗಳಿರುವ ಸ್ಟ್ರಾಂಗ್ ರೂಂ ಕಾಯುತ್ತಿರುವ 11 ಪೊಲೀಸರಿಗೆ ಮಲೇರಿಯಾ ಜ್ವರ ಬಾಧಿಸಿದೆ. ಫಲಿತಾಂಶ ಬರುವುದರೊಳಗಾಗಿ ಇನ್ನು ಹೆಚ್ಚಿನ ಪೊಲೀಸರು ಮಲೇರಿಯಾ ಜ್ವರ ಪೀಡಿತರಾಗುವ ಸಾಧ್ಯತೆಯಿದೆ.
ಭದ್ರತೆಗೆ ಪಿಐಎಸ್ಎಫ್ (ಕೇಂದ್ರ ಕೈಗಾರಿಕಾ ಭದ್ರಾತಾ ದಳ) 7 ಮಂದಿ ನಿಯೋಜಿತರಾಗಿದ್ದಾರೆ. ಅವರಲ್ಲಿ 5 ಮಂದಿ ಮಲೇರಿಯಾ ಜ್ವರ ಪೀಡಿತರಾಗಿದ್ದಾರೆ. ಮೊದಲನೇ ಪಾಳಿಯ 4 ಪೊಲೀಸರು ಮಲೇರಿಯಾದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. 2ನೇ ಪಾಳಿಯ ಇಬ್ಬರು ಪೊಲೀಸರು ಶನಿವಾರ ಮಲೇರಿಯಾ ಜ್ವರ ಪೀಡಿತರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಂದು ಪಾಳಿಯಲ್ಲಿ 60 ಪೊಲೀಸರು ಕೆಲಸ ಮಾಡುತ್ತಿದ್ದು, 3 ಪಾಳಿಯಲ್ಲಿ ಪೊಲೀಸರು ಸ್ಟ್ರಾಂಗ್ ರೂಂ ಕಾಯುತ್ತಿದ್ದಾರೆ. ಅಲ್ಲಿ ವಿಪರೀತ ಸೊಳ್ಳೆಗಳ ಕಾಟ. ಕಾವಲಿಗೆ ಕಾಯುವ ಪೊಲೀಸರು ಸ್ಥಳ ಬಿಟ್ಟು ಕದಲುವಂತಿಲ್ಲ. ಹೀಗಾಗಿ ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸೊಳ್ಳೆ ಓಡಿಸಲು ಫಾಗಿಂಗ್ ಮಾಡುವಂತೆ ಪೊಲೀಸರು ಜಿಲ್ಲಾಡಳಿತದಲ್ಲಿ ಮನವಿ ಮಾಡಿದ್ದರೂ ಏನೂ ಪ್ರಯೋಜನವಾಗಿಲ್ಲ.
ಕ್ಯಾಂಟಿನ್ ಇಲ್ಲ: ಸೊಳ್ಳೆ ಕಾಟ ಒಂದೆಡೆಯಾದರೆ ಸರಿಯಾದ ಹೊತ್ತಿಗೆ ಊಟ ಕೂಡ ಸಿಗುತ್ತಿಲ್ಲ. ಸ್ಟ್ರಾಂಗ್ ರೂಂ ಕಾಯುತ್ತಿರುವ ಪೊಲೀಸರಿಗೆ ಹಸಿವಾದಾಗ ಸರಿಯಾದ ಸಮಯಕ್ಕೆ ಊಟ- ತಿಂಡಿ ಮಾಡಲು ವ್ಯವಸ್ಥೆಯಿಲ್ಲದೆ ಚಡಪಡಿಸುತ್ತಿದ್ದಾರೆ. ಇದರ ಜೊತೆಗೆ ಕೆಲವು ದಿನಗಳಿಂದ ಮಳೆ ಸುರಿಯುತ್ತಿದ್ದು, ರಕ್ಷಣೆ ಪಡೆಯಲು ಪೊಲೀಸರು ತಮ್ಮ ಆಯುಧ ಬದಿಗಿಟ್ಟು ಶಾಲೆಯೊಳಗೂ ಹೋಗುವಂತಿಲ್ಲ. ಮಳೆಯಲ್ಲಿ ನೆನೆದೇ ಕರ್ತವ್ಯ ನಿರ್ವಹಿಸಬೇಕಾದ ಪರಿಸ್ಥಿತಿಯಿದೆ.
ಪ್ರತಿನಿತ್ಯ ಸ್ಥಳಕ್ಕೆ ಭೇಟಿ ನೀಡುತ್ತಿದ್ದೇನೆ. ಮಲೇರಿಯಾ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ಸೂಕ್ತ ಕ್ರಮಕ್ಕೆ ಆಯುಕ್ತರಿಗೆ ಸೂಚಿಸಿದ್ದೇನೆ. ಬಿಸಿಲು ಇಲ್ಲವಾದ್ದರಿಂದ ಶಾಮಿಯಾನ ಅವಶ್ಯಕತೆಯಿಲ್ಲ. ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇನೆ.
- ಎ.ಬಿ. ಇಬ್ರಾಹಿಂ, ಡಿಸಿ
ಮಲೇರಿಯಾ ಇರುವ ಬಗ್ಗೆ ದೂರು ಬಂದಿತ್ತು. ಸ್ಥಳಕ್ಕೆ ಭೇಟಿ ನೀಡುವಂತೆ ಆರೋಗ್ಯಾಧಿಕಾರಿಗೆ ಸೂಚಿಸಿದ್ದೇನೆ. ಫಾಂಗಿಗ್ನಿಂದ ಸೊಳ್ಳೆಯನ್ನು ಓಡಿಸಬಹುದಷ್ಟೇ, ಒಮ್ಮೆ ಮಲೇರಿಯಾ ಜ್ವರ ಬಂದರೆ ಇತರರಿಗೆ ಜ್ವರ ಹಬ್ಬುತ್ತದೆ. ಪರಿಸರದಲ್ಲಿ ನೀರು ನಿಲ್ಲದಂತೆ ಮಾಡುವ ಮೂಲಕ ಸೊಳ್ಳೆಗಳ ಉತ್ಪತ್ತಿಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಲಾಗಿದೆ.
- ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ಪಾಲಿಕೆ ಆಯುಕ್ತ